ಬೆಂಗಳೂರು (ಆ.17): ರಾಜ್ಕುಮಾರ್ ಅವರ ಕುಟುಂಬದೊಂದಿಗೆ ತಮಗೆ ಅವಿನಾಭಾವ ಸಂಬಂಧವಿದೆ. ರಾಘವೇಂದ್ರ ರಾಜ್ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಮೊದಲಿನಿಂದಲೂ ಆತ್ಮೀಯರು.
ಪಾರ್ವತಮ್ಮನವರಿಗೆ ನನ್ನ ಮೇಲೆ ಹೆಚ್ಚು ಪ್ರೀತಿ ಇತ್ತು. ಸಣ್ಣ ಸಣ್ಣ ಬೇಡಿಕೆಯನ್ನೂ ಹಂಚಿಕೊಳ್ಳುತ್ತಿದ್ದರು. ಒಂದು ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಕೊಡಿಸಪ್ಪಾ ಎಂದು ಹಿಂದೆ ಕೇಳಿದ್ದರು. ನಮ್ಮ ತಂದೆಯವರ ಸಂಸದರ ಕೋಟಾದಿಂದ ಕನೆಕ್ಷನ್ ಕೊಡಿಸಿದ್ದೆ ಎರಡು ದಿವಸದ ನಂತರ ಅಮ್ಮ ಫೋನ್ ಮಾಡಿ ಗ್ಯಾಸ್ ಕನೆಕ್ಷನ್ ಕೊಡಿಸಿದ್ದೀರಾ. ಊಟ ತಯಾರು ಮಾಡಿದ್ದೀನಿ. ಊಟಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದರು.
ಬೆಂಗಳೂರಿನಲ್ಲಿ ಡಾ.ರಾಜ್ಕುಮಾರ್ ಶೈಕ್ಷಣಿಕ ಆ್ಯಪ್ ಬಿಡುಗಡೆ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಟರಾದ ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಹಾಜರಿದ್ದರು.
ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂತಹ ಏಕಮೇವ ತಾರೆ ಅಂದರೆ ಡಾ.ರಾಜ್ಕುಮಾರ್. ಅವರ ಸರಳತೆ, ನಡೆ, ನುಡಿ, ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರದಲ್ಲಿರುವವರು, ಜನಪ್ರಿಯ ವ್ಯಕ್ತಿಗಳು ಕಲಿಯಬೇಕು. ಆಗಷ್ಟೇ ಹುಟ್ಟಿರುವ ಮಗುವಿನ ಮುಗ್ಧತೆ ಅವರಲ್ಲಿತ್ತು. ರಾಜ್ಕುಮಾರ್ ಅವರಲ್ಲಿದ್ದ ಸರಳತನ ಎಲ್ಲರಲ್ಲೂ ಕಂಡುಬರಲು ಸಾಧ್ಯವಿಲ್ಲ. ಬಹಳಷ್ಟುಸಾಧನೆ ಮಾಡಿದರೂ ಅವರಲ್ಲಿನ ಸರಳತನ ಕೊನೆಯವರೆಗೂ ಮಾಯವಾಗಲಿಲ್ಲ ಎಂದು ಸ್ಮರಿಸಿದರು.
ಹೊಳೆಯುವ ನಕ್ಷತ್ರ: ಆಕಾಶದಲ್ಲಿ ಲೆಕ್ಕಕ್ಕಿಲ್ಲದಷ್ಟುನಕ್ಷತ್ರ ಇರಬಹುದು. ಅದರಲ್ಲಿ ಒಂದು ಮಾತ್ರ ಎಲ್ಲದಕ್ಕಿಂತ ಹೆಚ್ಚು ಹೊಳೆಯುತ್ತಿರುತ್ತದೆ. ಆ ನಕ್ಷತ್ರವೇ ರಾಜ್ಕುಮಾರ್ ಅವರು. ಅವರ ಶಿಕ್ಷಣದ ಕನಸನ್ನು ಈಗ ಅವರ ಕುಟುಂಬದವರು ಸಾಕಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು