ಗ್ಯಾಸ್ ವಾಹನ ಪಲ್ಟಿ: ಬೆಂಕಿ ಉರಿದಂತೆ ಎಚ್ಚರಿಕೆ

ಭಾನುವಾರ, 2 ಡಿಸೆಂಬರ್ 2018 (18:05 IST)
ಅನಿಲ ಟ್ಯಾಂಕರೊಂದು ಮಗುಚಿ ಬಿದ್ದು, ಅಪಾರ ಪ್ರಮಾಣದ ಗ್ಯಾಸ್ ಸೋರಿಕೆಯಾದ ಘಟನೆ ನಡೆದಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಬಳಿಯ ಬೆದ್ರೋಡಿ ಎಂಬಲ್ಲಿ  ತಡರಾತ್ರಿ ಅನಿಲ ಟ್ಯಾಂಕರೊಂದು ಮಗುಚಿ ಬಿದ್ದಿದೆ. ಟ್ಯಾಂಕರ್ ಬಿದ್ದ ರಭಸಕ್ಕೆ ಅಪಾರ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿರುವುದರಿಂದ ಆಸುಪಾಸಿನ ಸುಮಾರು 2 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ ಬೆಂಕಿ ಉರಿಸದಂತೆ ಎಚ್ಚರಿಕೆ ನೀಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

ತಡರಾತ್ರಿ 2 ಗಂಟೆ ಸುಮಾರಿಗೆ ಮಂಗಳೂರಿನಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಭಾರತ್ ಪೆಟ್ರೋಲಿಯಂ ಕಂಪೆನಿಯ ಅನಿಲ ಟ್ಯಾಂಕರ್ ಬೆದ್ರೋಡಿಯ ತೂಗುಸೇತುವೆಯ ಬಳಿಯ ತಿರುವಿನಲ್ಲಿ ಮಗುಚಿಬಿದ್ದಿದೆ.

ಟ್ಯಾಂಕರ್ ನಲ್ಲಿ ಅನಿಲ ಸೋರಿಕೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪರಿಸರದ ನಿವಾಸಿಗಳಿಗೆ ಬೆಂಕಿ ಉರಿಸದಂತೆ ಎಚ್ಚರಿಕೆ ನೀಡಲಾಗಿದೆ. ಹತ್ತಿರದ ಮನೆಯವರನ್ನು   ತಡರಾತ್ರಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅನಿಲ ಶಿಪ್ಪಿಂಗ್ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಸ್ಥಳಕ್ಕೆ ಮೂರು ಖಾಲಿ ಟ್ಯಾಂಕರ್ಗಳನ್ನು ತರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪೆರಿಯಶಾಂತಿ ಹಾಗೂ ಹಳೆಗೇಟು ಬಳಿ ವಾಹನಗಳನ್ನು ತಡೆದು ಬದಲಿ ಮಾರ್ಗದಲ್ಲಿ ಕಳುಹಿಸಲಾಗುತ್ತಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ, ಪೊಲೀಸರು ಇದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ