BBMPಗೆ ಗೌರಿ-ಗಣೇಶ ಹಬ್ಬದ ಟೆನ್ಷನ್; ತಜ್ಞ ವೈದ್ಯರಿಂದಲೂ ಎಚ್ಚರಿಕೆ

ಗುರುವಾರ, 26 ಆಗಸ್ಟ್ 2021 (09:06 IST)
ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳೀಗ ಬಿಬಿಎಂಪಿ ಪಾಲಿಗೆ ಕಂಗಟ್ಟಾಗಿ ಪರಿಣಮಿಸಿದೆ. ಈಗಷ್ಟೇ ಮುಕ್ತಾಯ ಕಂಡ ವರಮಹಾಲಕ್ಷ್ಮಿ, ನಾಗರಪಂಚಮಿ ಹಾಗೂ ಮೊಹರ್ರಂ ಹಬ್ಬಗಳಿಂದ ಪಾಲಿಕೆ ಎಡವದೇ ಕೊರೋನಾ ಕಂಟ್ರೋಲ್ ಮಾಡಿದೆ. ಇದೀಗ ಮತ್ತೆ ಗೌರಿ ಗಣೇಶ ಹಬ್ಬ ಬಂದಿದ್ದು ಅಲ್ಪ ನಿಟ್ಟುಸಿರು ಬಿಟ್ಟಿದ್ದ ಪಾಲಿಕೆಗೆ ಮತ್ತೆ ಟೆನ್ಷನ್ ಶುರುವಾಗಿದೆ.

ಸಾಲು ಸಾಲು ಹಬ್ಬಗಳಿಂದ ಪಾಲಿಕೆಗೆ ಅಗ್ನಿ ಪರೀಕ್ಷೆ.!!
ಇತ್ತೇಚೆಗೆ ವರಮಹಾಲಕ್ಷ್ಮಿ ಆಚರಣೆಗೆ ಸರ್ಕಾರ ಮತ್ತು ಬಿಬಿಎಂಪಿ ಎಸ್ಓಪಿ ಬಿಡುಗಡೆ ಮಾಡಿ, ಹಬ್ಬವನ್ನು ಹೀಗೆ ಆಚರಣೆ ಮಾಡಿ ಅಂತ ಹೇಳಿತ್ತು. ಆದರೆ ಮಾರ್ಕೆಟ್ ಹಾಗೂ ದೇವಸ್ಥಾನಗಳಲ್ಲಿ ಎಲ್ಲವನ್ನೂ ಗಾಳಿಗೆ ತೂರಿ ಹಬ್ಬದ ಆಚರಿಸಲಾಯ್ತು. ನಗರದ ಮಾರ್ಕೆಟ್ ಏರಿಯಾಗಳಲ್ಲಿ ಯಾವ ರೀತಿಯ ಜನ ದಟ್ಟಣೆ ಉಂಟಾಗಿತ್ತು ಎಂದರೆ ಕೊರೋನ ಹಂಗಂದ್ರೇನು ಎನ್ನುವ ರೀತಿಯಲ್ಲಿ ಜನರ ನಡವಳಿಕೆಯಿತ್ತು. ಹೂವು ಹಣ್ಣು ಹಂಪಲು ಕೊಳ್ಳುವ ನೆಪದಲ್ಲಿ ಜನ ಜಾತ್ರೆಯೇ ಸೃಷ್ಟಿಯಾಗಿತ್ತು. ಅದೇನಾದರೂ ಬಿಬಿಎಂಪಿ ಮಾತ್ರ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾಗಿತ್ತು. ಹಬ್ಬದ ಬಳಿಕವೂ ಕೊರೋನಾ ಸ್ಪೋಟಗೊಳ್ಳದಂತೆ ಪಾಲಿಕೆ ನಿಗಾವಹಿಸಿತ್ತು. ಇದೀಗ ಮತ್ತೊಂದು ಹಬ್ಬ ಸನ್ನಿಹಿತವಾಗಿದ್ದು, ಮತ್ತೆ ಪಾಲಿಕೆಗೆ ಟೆನ್ಷನ್ ಶುರುವಾಗಿದೆ.
ಮುಂಬರುವ 10ರಂದು ನಾಡಿನಾದ್ಯಂತ ಗೌರಿ ಗಣೇಶ ಹಬ್ಬ ಜರುಗಲಿದೆ. ತುಸು ಹೆಚ್ಚೇ ವಿಜ್ರಂಭಣೆಯಿಂದ ಆಚರಿಸಲ್ಪಡುವ ಚತುರ್ಥಿ ಹಬ್ಬವನ್ನು ಈ ಬಾರಿಯೂ ಸರಳವಾಗಿ ಆಚರಿಸುವ ಲೆಕ್ಕಾಚಾರ ಸರ್ಕಾರ ಹಾಗೂ ಬಿಬಿಎಂಪಿಯದ್ದು. ಈ ಬಗ್ಗೆ ಈಗಾಗಲೇ ಗಂಭೀರವಾಗಿ ಚಿಂತನೆ ನಡೆಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಜ್ಞ ವೈದ್ಯರ ಜೊತೆ ಸಭೆ ನಡೆಸಿ ಹೇಗೆ ಹಾಗೂ ಯಾವ ರೀತಿಯಾದ ಆಚರಣೆಗೆ ಅನುಮತಿ ಕೊಡಬೇಕು ಎಂಬುವುದರ ಬಗ್ಗೆ ಮಾಹಿತಿ ಕೇಳಿದೆ. ಸದ್ಯ ಬೆಂಗಳೂರು ನಗರದಲ್ಲಿ ಸರಾಸರಿ 300 ರಂತೆ ಪ್ರಕರಣಗಳು ಪತ್ತೆಯಾಗುತ್ತಿವೆ. ಸಾವಿನ ಸಂಖ್ಯೆಯೂ ಒಂದಕ್ಕೆ ಇಳಿದಿದೆ. ಆದರೂ ನಗರದ ಕೆಲವೆಡೆ ಕೊರೋನಾ ಸ್ಪೋಟಗೊಳ್ಳುತ್ತಿದೆ. ಹೀಗಾಗಿ ಗೌರಿ ಗಣೇಶನ ಹಬ್ಬದ ವಿಚಾರವಾಗಿ ಯಾವುದೇ ಯಡವಟ್ಟು ಮಾಡಿಕೊಳ್ಳದೆ ಈಗಿರುವ ಸುಸ್ಥಿತಿಯನ್ನು ಹಾಳುಗೆಡವದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪಾಲಿಕೆ ಮೇಲಿದೆ. ಇದರ ಜೊತೆಗೆ ಸೆಪ್ಟೆಂಬರ್ ನಲ್ಲಿ ಮೂರನೇ ಅಲೆ ಬರಲಿದೆ ಎಂಬ ಎಚ್ಚರಿಕೆಯೂ ಇರೋದರಿಂದ ಈಗಿಂದೀಗಲೇ ಸಿದ್ಧಗೊಳ್ಳಲು ಪಾಲಿಕೆ ತೀರ್ಮಾನಿಸಿದೆ.
ಜನ ಮೈಮರೆತರೆ ಸಂಕಷ್ಟ ತಪ್ಪಿದ್ದಲ್ಲ : ಡಾ. ದೇವಿ ಶೆಟ್ಟಿ
ಇನ್ನು ಇಂಥದ್ದೊಂದು ಬೆಳವಣಿಗೆ ಆಗುತ್ತಿದ್ದಂತೆ ಅತ್ತ ಸರ್ಕಾರದ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ. ದೇವಿ ಶೆಟ್ಟಿ ಕೂಡ ಈ ಸಾಲು ಸಾಲು ಹಬ್ಬ ಹರಿ ದಿನಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಯಾವುದೇ ಆತಂಕವಿಲ್ಲ. ಕೊರೋನಾ ದಾಖಲೆ ರೀತಿಯಲ್ಲಿ ಇಳಿಕೆ ಕಂಡಿದೆ. ಹಬ್ಬ ಹರಿದಿನಗಳನ್ನು ಆಚರಿಸಬಹುದು. ಆದರೆ ಖಾಸಗಿಯಾಗಿ ಆಚರಿಸಿದರೆ ಒಳಿತು. ಸಾರ್ವಜನಿಕವಾಗಿ ಗುಂಪು ಕಟ್ಟಿಕೊಂಡು ಒಟ್ಟೊಟ್ಟಾಗಿ ಜನ ಸೇರಿದರೆ ಜನರಿಗೇ ಅದರಿಂದ ಸಮಸ್ಯೆ ಉಂಟಾಗಲಿದೆ ಅಂತ ಎಚ್ಚರಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ