ನಮಗೆ ನ್ಯಾಯ ಸಿಗಬೇಕು, ಗೌರಿ ಹಂತಕರನ್ನ ಬಂಧಿಸಬೇಕು: ಇಂದ್ರಜಿತ್, ಕವಿತಾ ಲಂಕೇಶ್

ಗುರುವಾರ, 7 ಸೆಪ್ಟಂಬರ್ 2017 (13:53 IST)
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗಳ ಬಗ್ಗೆ ಉಂಟಾಗಿರುವ ಗೊಂದಲ ನಿವಾರಣೆಗೆ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಮತ್ತು ಕವಿತಾ ಲಂಕೆಶ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಮ್ಮ ಅಕ್ಕನಿಗೆ ಸೈದ್ಧಾಂತಿಕ ಶತ್ರುಗಳಿದ್ದರೆ ಹೊರತು ವೈಯಕ್ತಿಕ ಶತ್ರುಗಳಿರಲಿಲ್ಲ. ಸೈದ್ಧಾಂತಿಕ ಶತ್ರುಗಳಿಂದಲೇ ಹತ್ಯೆಯಾಗಿರಬಹುದೆಂದು ಎಂದು ಹೇಳಿದ್ಧಾರೆ.

ನಮ್ಮ ಅಕ್ಕನನ್ನ ಕೊಂದವರನ್ನ ಬಂಧಿಸಬೇಕು ನಮಗೆ ನ್ಯಾಯ ಸಿಗಬೇಕು. ಎಸ್ಐಟಿ ತನಿಖೆ ಆರಂಭಿಸಿದ್ದಾರೆ. ತನಿಖೆ ನಡೆಯಲಿ. ಅದಕ್ಕೆ ಸಮಯ ಕೊಡೋಣ. ನ್ಯಾಯ ಸಿಗದಿದ್ದರೆ ಮಾತ್ರ ಸಿಬಿಐ ತನಿಖೆ ಬಗ್ಗೆ ಯೋಚಿಸುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಈ ಕೊಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ ಎಂದು ಮನವಿ ಮಾಡಿದ್ದಾರೆ.

ಗೌರಿ ಕುಟುಂಬ ಒತ್ತಾಯಿಸಿದರೆ ಸಿಬಿಐ ತನಿಖೆಗೆ ವಹಿಸಲು ಸಿದ್ಧವೆಂದು ಹೇಳಿರುವ ಸಿಎಂ ಸಿದ್ದರಾಮಯ್ಯನವರನ್ನ ಅಭಿನಂದಿಸಿದ ಇಂದ್ರಜಿತ್ ಲಂಕೇಶ್, ನಮ್ಮ ಅಕ್ಕ ಸಿದ್ದರಾಮಯ್ಯನವರ ಜೊತೆ ಮಗಳ ರೀತಿ ಇದ್ದರು. ನಕ್ಸಲರನ್ನ ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರಕ್ಕೆ ನೆರವು ನೀಡಿದ್ದಾರೆ. ಗೌರಿಗೆ ನ್ಯಾಯ ಒದಗಿಸಬೇಕೆಂದು ಸಿಎಂ ಸಿದ್ದರಾಮಯ್ಯನವರಿಗಿದೆ ಎಂದು ಇಂದ್ರಜಿತ್ ಹೇಳಿದರು.

 ಇದೇವೇಳೆ, ಮನೆ ಮುಂದೆ ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಗೌರಿ ಲಂಕೇಶ್ ತಾಯಿ ಜೊತೆ ಹೇಳಿಕೊಂಡಿದ್ದರು ಎಂದು ಕವಿತಾ ಲಂಕೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ