ಯಾವ ಪರಿಸ್ಥಿತಿಯೇ ಬರಲಿ, ಎದುರಿಸಲು ಸಿದ್ಧರಾಗೋಣ: ಏಮ್ಸ್ ನಿರ್ದೇಶಕ
ಸೋಮವಾರ, 20 ಡಿಸೆಂಬರ್ 2021 (21:40 IST)
ದೇಶದಲ್ಲಿ ತ್ವರಿತಗತಿಯಲ್ಲೇ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂದೆ ಏನಾಗುತ್ತದೋ ಎನ್ನುವ ಆತಂಕ ಜನರನ್ನು ಕಾಡಿದೆ. ಈ ಪ್ರಶ್ನೆಗೆ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಉತ್ತರ ನೀಡಿದ್ದಾರೆ.
ಒಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೇ ರೀತಿ ಮುಂದುವರಿದರೆ ಮುಂದೆ ಯಾವ ರೀತಿ ಪರಿಸ್ಥಿತಿಯಾದರೂ ಬರಬಹುದು. ನಾವೆಲ್ಲರೂ ತಯಾರಿಯಾಗಿರೋಣ ಎಂದಿದ್ದಾರೆ.
ಸರ್ಕಾರಗಳು ಎಲ್ಲದಕ್ಕೂ ಸಿದ್ಧವಾಗಬೇಕು. ಬ್ರಿಟನ್‌ನಲ್ಲಿ ಇರುವಷ್ಟು ಕೆಟ್ಟ ಪರಿಸ್ಥಿತಿ ನಮ್ಮಲ್ಲಿಲ್ಲ. ಹಾಗಾಗುವುದೂ ಬೇಡ. ಆದರೆ ನಾವು ಎಲ್ಲ ರೀತಿ ಪರಿಸ್ಥಿತಿಗೂ ಸಿದ್ಧರಾಗಿ ಇರಬೇಕು. ಪ್ರಪಂಚದ ಯಾವುದೇ ದೇಶದಲ್ಲಿ ವೈರಸ್ ಕಂಡರೂ ನಾವು ಎಚ್ಚೆತ್ತುಕೊಳ್ಳಬೇಕು.
ನಮ್ಮ ಸುತ್ತಮುತ್ತ ಸೋಂಕಿನ ಪ್ರಕರಣಗಳು ಬರುವವರೆಗೂ ಕಾಯಬಾರದು. ಪ್ರತಿಯೊಬ್ಬ ನಾಗರಿಕನೂ ಜಾಗ್ರತೆಯಿಂದ ಇದ್ದರೆ ಕೊರೋನಾದಿಂದ ದೂರ ಇರಬಹುದು ಎಂದಿದ್ದಾರೆ. ಬೇರೆ ದೇಶಗಳಲ್ಲಿ ಕಂಡುಬಂದ ಪ್ರಕರಣಗಳ ಅಧ್ಯಯನ ಮುಖ್ಯ. ಮೇಲ್ವಿಚಾರಣೆ ಮಾಡಿ, ಹೆಚ್ಚಿನ ಡೇಟಾ ಸಂಗ್ರಹಿಸಬೇಕು ಎಂದಿದ್ದಾರೆ.