ಬೆಂಗಳೂರು : ರಾಜ್ಯದಲ್ಲಿ ಮತದಾನ ಆರಂಭವಾಗಿದ್ದು ವಿಶೇಷವಾಗಿ ಬೆಂಗಳೂರಿನಲ್ಲಿ ಬೆಳಗ್ಗೆ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ಪ್ರತಿಬಾರಿಯೂ ಬೆಂಗಳೂರು ನಗರದಲ್ಲಿ ಕಡಿಮೆ ಪ್ರಮಾಣದ ಮತದಾನ ದಾಖಲಾಗುತ್ತದೆ. ಹೀಗಾಗಿ ಈ ಬಾರಿ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ ಮತ ಪ್ರಮಾಣ ಹೆಚ್ಚಿಸಲು ಕಸರತ್ತು ಮಾಡಿತ್ತು.
ಬೆಳಗ್ಗೆ 7 ಗಂಟೆಗೆ ಜನರು ಸರದಿ ನಿಂತು ವೋಟ್ ಹಾಕಿದ್ದಾರೆ. 2018ರ ಚುನಾವಣೆ ಮೇ 12 ಶನಿವಾರ ನಡೆದಿತ್ತು. ವೀಕೆಂಡ್ ಆದ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದ ಮತದಾನ ನಡೆದಿತ್ತು. ಆದರೆ ಈ ಬಾರಿ ಬುಧವಾರ ನಡೆಯುತ್ತಿರುವ ಕಾರಣ ಹೆಚ್ಚಿನ ಪ್ರಮಾಣದ ಮತದಾನ ನಡೆಯುವ ನಿರೀಕ್ಷೆಯಿದೆ. ಮಧ್ಯಾಹ್ನದ ಬಳಿಕ ಮಳೆ ಬರುವ ಸಾಧ್ಯತೆ ಇರುವುದರಿಂದ ನಗರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಬರುತ್ತಿದ್ದಾರೆ.
ಮತಗಟ್ಟೆಯ ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಕೆಲವೊಂದು ಕಡೆ ಪೊಲೀಸರೇ ಸ್ವಿಚ್ ಆಫ್ ಮಾಡಿ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಮೊಬೈಲ್ ವಿಚಾರದ ಬಗ್ಗೆ ಕೆಲವೊಂದು ಕಡೆ ಕಿರಿಕಿರಿ ನಡೆದ ಘಟನೆ ನಡೆದಿದೆ.