ವೀಕೆಂಡ್ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಹುದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಬೆಳಗಿನ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಹುದು ಎಂದಿದ್ದಾರೆ. ಆದರೆ, ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.
ಈಗಾಗಲೇ ವೀಕೆಂಡ್ನಲ್ಲಿ ಹೋಟೆಲ್, ಬಾರ್, ರೆಸ್ಟೋರೆಂಟ್ ಬಂದ್ ಮಾಡಿಸಲು ಸುತ್ತೋಲೆ ಹೊರಡಿಸಲಾಗಿದೆ. ಕನಕಪುರ ವೃತ್ತದ ಎಲ್ಲಾ ಪಿಎಸ್ಐಗಳಿಗೆ ಸರ್ಕಾರದಿಂದ ಸುತ್ತೋಲೆ ನೀಡಲಾಗಿದೆ. ಪಿಎಸ್ಐಗಳು ತಾವೇ ಮುಂದೆ ನಿಂತು ಹೋಟೆಲ್, ಬಾರ್ , ರೆಸ್ಟೋರೆಂಟ್ ಅನ್ನು ಶುಕ್ರವಾರ ರಾತ್ರಿ ಬಂದ್ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಆದೇಶ ಹಿನ್ನೆಲೆ ಎಲ್ಲ ಪಿಎಸ್ಐಗಳಿಗೂ ಸೂಚನೆ ನೀಡಲಾಗಿದೆ.
ಸರ್ಕಾರ ಕೊವಿಡ್-19 ನಿಗ್ರಹಕ್ಕೆ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ನಿರ್ಬಂಧನೆಗಳನ್ನ ಹೇರಿದ್ದು, ಈಗ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಧಿಕಾರಿ ವಿವೇಚನೆಗೆ ಬಿಟ್ಟಿದ್ದು ಎಂದು ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಮಾರಾಟ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು, ಪ್ರಾದೇಶಿಕ ಅವಶ್ಯಕತೆಗಳಿಗೆ ಆನುಗುಣವಾಗಿ ಅಯಾ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬಹುದು ಎಂದು ಹೇಳಿದೆ.