ಅಕ್ಕಿಯ ಬದಲು ಖಾತೆಗೆ ಹಣ ಹಾಕಲು ಸರ್ಕಾರ ನಿರ್ಧಾರ : ಮುನಿಯಪ್ಪ
ಗುರುವಾರ, 29 ಜೂನ್ 2023 (06:53 IST)
ಬೆಂಗಳೂರು : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ 5 ಕೆ.ಜಿ ಅಕ್ಕಿ ಕೊಟ್ಟು ಉಳಿದ 5 ಕೆ.ಜಿ ಅಕ್ಕಿಯ ಬದಲು ಅದರ ಹಣವನ್ನು ನೀಡುವುದಾಗಿ ಸರ್ಕಾರ ನಿರ್ಧಾರ ಮಾಡಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಬಳಿಕ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ಹೆಚ್.ಕೆ ಪಾಟೀಲ್, ಅನ್ನಭಾಗ್ಯ ಯೋಜನೆ ಅಕ್ಕಿ ಹೊಂದಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾಪ ತಿರಸ್ಕಾರ ಹಾಗೂ ಇತರೆ ರಾಜ್ಯಗಳಿಂದ ಅಕ್ಕಿ ಕೊಳ್ಳುವ ಮುಂದಿನ ನಡೆ ಬಗ್ಗೆ ಸಹ ಚರ್ಚೆ ನಡೆಸಲಾಯಿತು ಎಂದರು.
ಬಳಿಕ 10 ಕೆ.ಜಿ ಅಕ್ಕಿ ಬದಲಿಗೆ 8 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ/ಗೋಧಿ ಅಥವಾ ಜೋಳ ಕೊಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಈ ವೇಳೆ 5 ಕೆ.ಜಿ ಅಕ್ಕಿ ಕೊಟ್ಟು ಇನ್ನೂ 5 ಕೆ.ಜಿ ಅಕ್ಕಿಗೆ ಹಣ ಕೊಡುವುದರ ಬಗ್ಗೆ ನಿರ್ಧಾರ ಮಾಡಲಾಯಿತು ಎಂದು ಹೇಳಿದರು.
ಕೇಂದ್ರ ಸಚಿವರಿಗೆ ಮನವಿ ಮಾಡಿ ಒತ್ತಾಯ ಮಾಡಿದ್ದೆವು. 15 ಲಕ್ಷ ಟನ್ ಅನ್ನು ಓಪನ್ ಟೆಂಡರ್ ಕರೆದು ಕೇಂದ್ರದವರು ಕೊಟ್ಟಿದ್ದಾರೆ. ಆದ್ರೆ ನಮಗೆ ಅಕ್ಕಿ ಕೊಡಲು ನಿರಾಕರಣೆ, ರಾಜಕೀಯ ಮಾಡಿದ್ರು. ಎಫ್ ಸಿಐ 34 ರೂ. ದರ ಫಿಕ್ಸ್ ಮಾಡಿದ್ದಾರೆ. ಎಫ್ ಸಿಐ ರೇಟ್ ಗೆ ಬೇರೆ ಸಂಸ್ಥೆಗಳು ಅಕ್ಕಿ ಕೊಡಲು ಮುಂದೆ ಬರಲಿಲ್ಲ. ಅಕ್ಕಿ ದಾಸ್ತಾನು ತಯಾರಾಗುವ ತನಕ ಕೆಜಿಗೆ 34 ರೂ. ಹಣವನ್ನ ಕೊಡುತ್ತೇವೆ ಎಂದು ಕೆ.ಹೆಚ್ ಮುನಿಯಪ್ಪ ಹೇಳಿದರು.