ಸರ್ಕಾರಿ ಶಾಲೆ ಮಕ್ಕಳಿಗೆ ಈ ಸಲ ಬ್ರ್ಯಾಂಡೆಡ್ ಶೂ ಇಲ್ಲ

ಗುರುವಾರ, 21 ಜುಲೈ 2022 (21:05 IST)
ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ವರ್ಷಗಳ ಬಳಿಕ ಮತ್ತೆ ಶೂ, ಸಾಕ್ಸ್ ನೀಡಲು ಆದೇಶ ಮಾಡಿರುವ ಸರ್ಕಾರ ಈ ಹಿಂದಿನಂತೆ ಬ್ರ್ಯಾಂಡೆಡ್’ ಶೂಗಳನ್ನೇ ನೀಡಬೇಕೆಂಬ ವಿಚಾರದಲ್ಲಿ ರಾಜಿ ಮಾಡಿಕೊಂಡಂತೆ ಕಾಣುತ್ತಿದೆ. ಅಲ್ಲದೆ, ಶೂ ಖರೀದಿಗೆ ಐದು ವರ್ಷಗಳ ಹಿಂದಿನ ದರವನ್ನೇ ನಿಗದಿಪಡಿಸಿರುವುದು ಟೀಕೆಗೆ ಗುರಿಯಾಗಿದೆ. ಕೋವಿಡ್ ಪೂರ್ವದ 2019-20ನೇ ಸಾಲಿನಲ್ಲಿ ಶೂ ವಿತರಣೆಗೆ ಹೊರಡಿಸಿದ್ದ ಆದೇಶದಲ್ಲಿ ಸರ್ಕಾರ ಕಡ್ಡಾಯವಾಗಿ ಬ್ರ್ಯಾಂಡೆಡ್ ಶೂಗಳನ್ನೇ ಖರೀದಿಸಿ ನೀಡಬೇಕೆಂದು ಷರತ್ತು ವಿಧಿಸುತ್ತು. ಅಲ್ಲದೆ, ಬ್ರಾಂಡ್ಗಳ ಆಯ್ಕೆಗೆ ಬಾಟಾ, ಪ್ಯಾರಾಗಾನ್, ಲಿಬರ್ಟಿ ಸೇರಿದಂತೆ ಸುಮಾರು 15 ಬ್ರಾಂಡ್ಗಳ ಪಟ್ಟಿಯನ್ನೂ ಸಹ ನೀಡಿತ್ತು. ಈ ಬಾರಿಯ ‘ಬ್ರಾಂಡೆಡ್’ ಷರತ್ತನ್ನು ಕೈಬಿಟ್ಟು ಕೇವಲ ಗುಣಮಟ್ಟದ ಶೂಗಳನ್ನು ನೀಡಬೇಕೆಂದು ಸೂಚಿಸಿದೆ.
ಅಲ್ಲದೆ, 2017-18ರಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ ಶೂ ಖರೀದಿಸಲು ಒಂದು ಜೊತೆಗೆ 265 ರು., 6 ರಿಂದ 8 ನೇ ತರಗತಿ ಮಕ್ಕಳಿಗೆ ತಲಾ 295 ರು. ಮತ್ತು 9 ಮತ್ತು 10 ನೇ ತರಗತಿಯ ಪ್ರತಿ ಮಗುವಿಗೆ 325 ರು. ದರ ನಿಗದಿ ಮಾಡಲಾಗಿತ್ತು. ಈಗ 2022-23ರಲ್ಲೂ ಸರ್ಕಾರ ಇದೇ ದರ ನಿಗದಿಪಡಿಸಿ ಸರ್ಕಾರ 132 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಮಕ್ಕಳಿಗೆ ಎಷ್ಟರ ಮಟ್ಟಿಗೆ ಗುಣಮಟ್ಟದ ಶೂ ಖರೀದಿಸಿ ವಿತರಿಸಲು ಸಾಧ್ಯ ಎಂಬುದು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರ ಪ್ರಶ್ನೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ