ಸರ್ಕಾರಿ ಶಾಲೆಗೆ 2.5 ಎಕರೆ ಸ್ವಂತ ಜಮೀನು ದಾನ ಮಾಡಿದ ಮುಸ್ಲಿಂ ಕುಟುಂಬ

ಭಾನುವಾರ, 20 ಫೆಬ್ರವರಿ 2022 (18:38 IST)
ತಮ್ಮ ಸ್ವಾರ್ಥಕ್ಕಾಗಿ ಕೆಲವರು ಹಲವೆಡೆ ಹಿಜಾಬ್‌-ಕೇಸರಿ ಶಾಲು ವಿವಾದ ಹಬ್ಬಿಸುತ್ತಿದ್ದರೆ, ಇಲ್ಲೊಂದು ಮುಸ್ಲಿಂ ಕುಟುಂಬ ಮಕ್ಕಳ ಶಿಕ್ಷಣಕ್ಕಾಗಿ ನಿಸ್ವಾರ್ಥವಾಗಿ ತಮ್ಮ ಸ್ವಂತ ಜಮೀನನ್ನು ದಾನ ಮಾಡಿ ಮಾದರಿಯಾಗಿದೆ.
ಎಚ್‌.ಡಿ.ಕೋಟೆ ತಾಲ್ಲೂಕಿನ ಮಾರ್ಚಳ್ಳಿ ಗ್ರಾಮದ ಮಹಮದ್‌ ಜಾಫರ್‌ ಎಂಬವರ ಮಕ್ಕಳು ತಮ್ಮ 2.5 ಎಕರೆ ಜಮೀನನ್ನು ಬಾಜೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರ ಮಾಡಿದ್ದು, ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಕೆಲಸ ಮಾಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು ಎಂದುಕೊಂಡಿದ್ದ ಮಾರ್ಚಳ್ಳಿ ಗ್ರಾಮದ ಮಹಮ್ಮದ್ ಜಾಫರ್ ಅವರ ಕನಸನ್ನು ಅವರ ನಿಧನದ ಬಳಿಕ ಮಕ್ಕಳು ನನಸಾಗಿಸಿದ್ದಾರೆ. ಶಾಲೆಗೆ ಲಕ್ಷಾಂತರ ರೂ. ಬೆಲೆ ಬಾಳುವ ಭೂಮಿಯನ್ನು ದಾನವಾಗಿ ನೀಡುವ ಮೂಲಕ ಸುತ್ತಮುತ್ತಲ ಗ್ರಾಮಸ್ಥರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
 
ತಂದೆ ಕನಸು ನನಸು ಮಾಡಿದ ಮಕ್ಕಳು
ಈ ಸಂಬಂಧ ಜಾಫರ್ ಅವರ ಮಗ ಮೊಹಮ್ಮದ್ ರಕೀಬ್ ಮಾತನಾಡಿ, ʼನನ್ನ ತಂದೆ ಶಿಕ್ಷಣದ ಕುರಿತು ಸಾಕಷ್ಟು ಪ್ರೀತಿ ಹೊಂದಿದ್ದರು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ಅವರ ಆಶಯವಾಗಿತ್ತು. ಅದಕ್ಕಾಗಿ ಅವರು ಹಿಂದೆಯೇ ಶಾಲೆಗೆ ಭೂಮಿಯನ್ನು ದಾನ ಮಾಡುವುದಾಗಿ ಮಾತು ನೀಡಿದ್ದರು. ನಾವು ಈಗ ಅದನ್ನು ಉಳಿಸಿಕೊಂಡಿದ್ದೇವೆ. ನಾವು ಆರು ಮಂದಿ ಮಕ್ಕಳಿದ್ದು, ಎಲ್ಲರೂ ಚರ್ಚೆ ಮಾಡಿ ಒಟ್ಟು ಇರುವ 12 ಎಕರೆಯಲ್ಲಿ 2.5 ಎಕರೆಯನ್ನು ಶಾಲೆಗೆ ನೀಡಲು ನಿರ್ಧರಿಸಿದ್ದೇವು. ಅದರಂತೆ ಫೆಬ್ರವರಿ 15ರಂದು ಶಾಲೆಯ ಹೆಸರಿಗೆ ಜಮೀನನ್ನು ನೋಂದಾಯಿಸಿದ್ದೇವೆʼ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ