ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಮಾಡುವಂತೆ ರಾಜ್ಯಾದ್ಯಂತ ಸರಕಾರಿ ನೌಕರರು ಮುಷ್ಕರ ನಡೆಸಿದ್ದು, ವಿಧಾನಸೌಧ ನೌಕರರು ಮುಷ್ಕರವನ್ನು ಬೆಂಬಲಿಸಿ ಕಛೇರಿಯನ್ನು ತೆರೆಯದೆ ಪ್ರತಿಭಟನೆ ನಡೆಸಿದ್ದಾರೆ. ನೌಕರರು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಿಧಾನಸೌಧ ಬಣಗುಡುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ನೌಕರರ ಮುಷ್ಕರಕ್ಕೆ ರಾಜ್ಯದ್ಯಂತ ಸಂಪೂರ್ಣ ಬೆಂಬಲ ದೊರೆತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್.ಸರ್ಕಲ್ ಬಳಿ ಪ್ರತಿಭಟನಾ ನಿರತರು, ಸರಕಾರಿ ವಾಹನಗಳನ್ನು ಚಲಾಯಿಸುತ್ತಿರುವ ಚಾಲಕರನ್ನು ತಡೆದು, ಇಂದು ಮುಷ್ಕರ ಇರುವ ಹಿನ್ನೆಲೆಯಲ್ಲಿ ಸರಕಾರಿ ಕಾರ್ಯಗಳನ್ನು ನಿರ್ವಹಿಸದಂತೆ ಎಚ್ಚರಿಕೆ ನೀಡಿರುವ ಘಟನೆಗಳು ನಡೆದಿವೆ.
ಗದಗ್ ಜಿಲ್ಲೆಯಲ್ಲಿ ಬಹುತೇಕ ಸರಕಾರಿ ಕಛೇರಿಗಳಿಗೆ ಬೀಗ ಹಾಕಿ ನೌಕರರು, ನಗರದ ಮುಳಗುಂದ ರಸ್ತೆಯಲ್ಲಿರುವ ನೌಕರರ ಭವನದಿಂದ ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಮಧ್ಯಯೇ ಪ್ರತಿಭಟನೆ ಕೈಗೊಂಡಿರುವ ನೌಕರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಜ್ಯದ ಎಲ್ಲ ಭಾಗದಲ್ಲೂ ನೌಕರರ ಪ್ರತಿಭಟನೆ ಕಿಚ್ಚು ಹತ್ತಿಕೊಂಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಯ ನೌಕರರು ಬಹುತೇಕ ಕಛೇರಿಗಳಿಗೆ ಬೀಗ ಹಾಕಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ವೇತನ ಪರಿಷ್ಕರಣೆ ಮಾಡುವಂತೆ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.