ನಾಗರಹೊಳೆ: ವನ್ಯಜೀವ ಸಂಕುಲ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಈ ಹಿಂದೆಯೂ ಪ್ರವಾಸಿಗರಿಗೆ ಸಫಾರಿ ಮೂಲಕ ಅನನ್ಯ ವನ್ಯ ಸಂಕುಲಗಳ ವೀಕ್ಷಣೆಗೆ ಅವಕಾಶ ಇತ್ತಾದರೂ ವಾಹನಗಳ ಕೊರತೆ ಹಾಗೂ ವೈಜ್ಞಾನಿಕ ವ್ಯವಸ್ಥೆ ಇಲ್ಲದೆ ಇಲಾಖೆ ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈಗ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯುವ ದೃಷ್ಟಿಯಿಂದ ಅರಣ್ಯ ಇಲಾಖೆ ವಿನೂತನ ಪ್ರಯೋಗ ಒಂದಕ್ಕೆ ಮುನ್ನುಡಿ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದೇ ಜನವರಿ ತಿಂಗಳಲ್ಲಿ ಈ ಪ್ರಯೋಗ ಜಾರಿಯಾಗಲಿದೆ.
ಈ ಮೊದಲು ಅರಣ್ಯ ಇಲಾಖೆಯ ವಾಹನಗಳು ಮಾತ್ರ ಸಫಾರಿಗೆ ಬಳಕೆಯಾಗುತ್ತಿದ್ದು. ಇದೀಗ ಕೇರಳ ರಾಜ್ಯದ ವಯನಾಡು ವ್ಯಾಪ್ತಿಯ ಸಫಾರಿ ಕ್ಯಾಂಪಿನ ಮಾದರಿಯಲ್ಲಿ ಸ್ಥಳಿಯ ಖಾಸಗಿ ವಾಹನಗಳನ್ನೂ ಕೂಡ ಟೆಂಡರ್ ಮೂಲಕ ಗುರುತಿಸಿ ಸಫಾರಿಗೆ ಬಳಸಿಕೊಳ್ಳುವ ನಿರ್ಧಾರವನ್ನು ಅರಣ್ಯ ಇಲಾಖೆ ಹಾಗು ಸರಕಾರ ಮಾಡಿದೆ. ಪ್ರವಾಸಿಗರು ತಮ್ಮ ಖಾಸಗಿ ವಾಹನವನ್ನು ಸಫಾರಿಗೆ ಬಳಸಬಹುದಾಗಿದ್ದು. ವಿಶೇಷ ಅನುಮತಿ ಮೇರೆಗೆ ಜಿ.ಪಿ.ಎಸ್ ಅಳವಡಿಕೆ ಮಾಡಿಸಿಕೊಂಡು ಪ್ರವಾಸಿಗರ ವಾಹನಗಳಿಗೂ ಮುಂದಿನ ದಿನಗಳಲ್ಲಿ ಸಫಾರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.
ತಿತಿಮತಿ-ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಸಫಾರಿಗೆ ಚಿಂತನೆ; ದಕ್ಷಿಣ ಕೊಡಗಿನ ತಿತಿಮತಿ-ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 120ಕ್ಕೂ ಹೆಚ್ಚು. ಕಿ.ಲೋ ಮೀಟರ್ ವ್ಯಾಪ್ತಿಯ ರಕ್ಷಿತಾರಣ್ಯ ಪ್ರದೇಶದಲ್ಲಿ ಅನನ್ಯ ವನ್ಯಜೀವಿಸಂಕುಲವಿದ್ದು. ಮುಂದಿನ ದಿನಗಳಲ್ಲಿ ಆ ವ್ಯಾಪ್ತಿಯಲ್ಲಿಯೂ ಸಫಾರಿಗೆ ಅವಾಕಾಶ ಕಲ್ಪಿಸುವತ್ತ ಅರಣ್ಯ ಇಲಾಖೆ ಚಿಂತಿಸಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.