ಎಚ್ ಡಿ ಕೆ ವಾಗ್ದಾಳಿ

ಶನಿವಾರ, 9 ಏಪ್ರಿಲ್ 2022 (18:20 IST)
ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಹೇಳಿಕೆಗೆ ರಾಜ್ಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ. ರಾಜ್ಯಗಳು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ (English) ಬದಲು ಹಿಂದಿ(Hindi)ಯನ್ನು ಬಳಸಬೇಕು ಎಂದು ಅಮಿತ್ ಶಾ ಹೇಳಿಕೆ ನೀಡಿದ್ದರು.
ಸದ್ಯ ಈ ಹೇಳಿಕೆಗೆ ಕನ್ನಡ ಪರ ಹೋರಾಟಗರರು, ಸಂಘಟನೆಗಳು ವ್ಯಾಪಕ ಆಕ್ರೋಶ ಹಾಕುತ್ತಿದ್ದು, ಇದು ಹಿಂದಿ ಹೇರಿಕೆಯ ಯತ್ನ ಎಂದ ವಾಗ್ದಾಳಿ ನಡೆಸಿದ್ದಾರೆ. ಇದೀಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಪ್ರತಿಕ್ರಿಯಿಸಿದ್ದು, ಇಂತಹ ಹುಳಿ ಹಿಂಡುವ ಹೇಳಿಕೆಗಳು ಆಘಾತಕಾರಿ ಎಂದು ಆತಂಕ ಪಡಿಸಿ, ಕೇಂದ್ರ ಗೃಹ ಸಚಿವರಿಗೆ ಮಾತಿನ ಚಾಟಿ ಏಟು ಬೀಸಿದ್ದಾರೆ. ಸಾಲು ಸಾಲು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
 
ಟ್ವೀಟ್: ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಕಳೆದ 75 ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಇರುವ ರಾಜ್ಯಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಳಿ ಹಿಂಡಿ, ಹಿಂದಿ ಹೇರಿಕೆ ಬಗ್ಗೆ ಹೇಳಿಕೆ ನೀಡುತ್ತಿರುವುದು ಆಘಾತಕಾರಿ.
 
ಪ್ರತಿಯೊಂದಕ್ಕೂ ಹಿಂದುತ್ವದ ಜಪ ಮಾಡಿ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಸಮಾಜ ಮತ್ತು ಜನರನ್ನು ಒಡೆಯುತ್ತಿರುವ ಬಿಜೆಪಿ, ಈಗ ಭಾಷೆಯನ್ನೂ ಟೂಲ್ ಕಿಟ್ ಮಾಡಿಕೊಂಡು ವಿಭಜನೆಗೆ ಹೊರಟಿರುವುದು ದೇಶಕ್ಕೆ ಗಂಡಾಂತರಕಾರಿ.
 
ಒಡೆದು ಆಳುವ ನೀತಿ
 
ಬ್ರಿಟಿಷರು ಪ್ರತಿ ಸಂಸ್ಥಾನವನ್ನು ಆಕ್ರಮಿಸಿಕೊಳ್ಳುವ ಮುನ್ನ ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಈಗ ಬಿಜೆಪಿ ಅದೇ ನೀತಿ ಮುಂದುವರೆಸಿದ್ದು, ಬ್ರಿಟೀಷರಿಗೂ ಮತ್ತು ಬಿಜೆಪಿಗೆ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದಕ್ಕೆ ಇದೇ ಜೀವಂತ ಸಾಕ್ಷಿ.
 
ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ? ಅವರಿಗೆ ಪ್ರಾದೇಶಿಕ ಭಾಷೆಗಳ ಮೇಲೆ ಯಾಕೆ ಈ ಪರಿ ದ್ವೇಷ? ನಮ್ಮ ಭಾಷೆ ನಮಗೆ ಮುಖ್ಯ. ಮಾತೃಭಾಷೆಗೇ ಅಗ್ರಸ್ಥಾನ. ಕರ್ನಾಟಕದಲ್ಲಿ ಕನ್ನಡವೇ ಮೊದಲು. ಹಿಂದಿ ನಮ್ಮ ಭಾಷೆಯಲ್ಲ. ಹಿಂದಿ ಹೇರಿಕೆ ವಿರುದ್ದ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ.
 
ವೈದ್ಯ ಶಿಕ್ಷಣವು ಉಳ್ಳವರದ್ದು ಅನ್ನೋದು ಸರ್ಕಾರದ ಹಿಡನ್ ನೀತಿ
 
ದೂರದೃಷ್ಟಿ ಇಲ್ಲದ ರಾಜ್ಯ ಸರಕಾರಕ್ಕೆ ತನ್ನಿಮಿತ್ತ ದಿನಗಳಿಗೆ ಶುಭಾಶಯ ಕೋರುವುದು ಒಂದು ಪ್ಯಾಶನ್ ಆಗಿಬಿಟ್ಟಿದೆ. ವಿಶ್ವ ಆರೋಗ್ಯ ದಿನದ ಕಥೆಯೂ ಹಾಗೆಯೇ ಆಗಿತ್ತು. ಸ್ನಾತಕೋತ್ತರ ವೈದ್ಯಕೀಯ ವಿಭಾಗದಲ್ಲಿ ವಿವಿಧ ಕೋರ್ಸುಗಳನ್ನು ಹೆಚ್ಚಿಸುವ ಒತ್ತಡ ಇದ್ದಾಗ್ಯೂ ಹಾಗೂ ಲಭ್ಯ ಸೀಟುಗಳ ಸದ್ಬಳಕೆ ಮಾಡಿಕೊಳ್ಳುವ ಅವಕಾಶವನ್ನು ರಾಜ್ಯ ಸರಕಾರ ಕೈಚೆಲ್ಲಿರುವ ಬಗ್ಗೆ ಪತ್ರಿಕೆ ವಿಸ್ತೃತ ವರದಿ ಮಾಡಿ ಗಮನ ಸೆಳೆದಿದೆ.
 
ಫೆ.14 ರಂದು ಘನಕಾರ್ಯ ಮಾಡಿದ ಸರ್ಕಾರ
 
ವೈದ್ಯ ಶಿಕ್ಷಣವು ಉಳ್ಳವರದ್ದು ಎನ್ನುವ ಹಿಡನ್ ನೀತಿಯ ಸರಕಾರವು, ಹಿಂದೆ ಮುಂದೆ ನೋಡದೇ ಈಗಾಗಲೇ ಸೇವೆ ಮಾಡುತ್ತಿದ್ದ ವೈದ್ಯರಿಗೆ ಮೀಸಲಾಗಿದ್ದ 112 DNB (Diplomate of national Board) ಸೀಟುಗಳನ್ನು ಅಖಿಲ ಭಾರತ ಕೋಟಾಗೆ (AIQ) ಹಿಂತಿರುಗಿಸಿ ಕೈ ತೊಳೆದುಕೊಂಡಿದೆ. 2022 ಫೆ.14ರಂದು ಈ ಘನಕಾರ್ಯ ಮಾಡಿದೆ.
 
ಆದರೆ, ಕೆಲ ದಿನಗಳಲ್ಲೇ DNB ಕೋರ್ಸಿಗೆ ಅಂಕಗಳ ಕಟ್ ಆಫ್ ಮಾಡಲಾಗಿದ್ದು, ಆ ನಂತರ ರಾಜ್ಯದ ಇನ್ನೂ 30 ವೈದ್ಯರು ಪ್ರವೇಶಕ್ಕೆ ಅರ್ಹತೆ ಗಳಿಸಿದ್ದರು. ಈಗ ಇವರೆಲ್ಲರೂ ಅರ್ಹತೆ ಇದ್ದರೂ ಪ್ರವೇಶ ಪಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ
 
ಅಂಕಗಳನ್ನು ಕಟ್ ಆಫ್ ಮಾಡುವ ಮೊದಲೇ ಸರಕಾರವು ಸೀಟುಗಳನ್ನು ವಾಪಸ್ ಕೊಟ್ಟುಬಿಟ್ಟ ಕಾರಣಕ್ಕೆ ಸೇವಾನಿರತ ವೈದ್ಯರಿಗೆ ಅನ್ಯಾಯವಾಗಿದೆ. ತಪ್ಪು ಮಾಡಿದ ಮೇಲೆ ಎಚ್ಚೆತ್ತ ಸರಕಾರ, ಈಗ ಆ 112 ಸೀಟುಗಳನ್ನು ವಾಪಸ್ ಕೊಡಿ ಎಂದು ಬೇಡಿದರೂ AIQ ಕೊಡುತ್ತಿಲ್ಲ.
 
ರಾಜ್ಯ ಸರ್ಕಾರ ಮಾಡಿದ ದೊಡ್ಡ ಪ್ರಮಾದ
 
2022 ಏಪ್ರಿಲ್ 5ರಂದು ಪತ್ರ ಬರೆದು ಸೀಟು ವಾಪಸಾತಿ ಪ್ರಶ್ನೆ ಇಲ್ಲ ಎಂದು ಕೇಂದ್ರ ತಿಳಿಸಿದೆ. ಇದು ಕರ್ನಾಟಕದ ದುಸ್ಥಿತಿ & ರಾಜ್ಯ ಸರಕಾರ ಮಾಡಿದ ದೊಡ್ಡ ಪ್ರಮಾದ. ರಾಜ್ಯ ಸರಕಾರವು, ಆರೋಗ್ಯ ಮತ್ತು ವೈದ್ಯ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದಕ್ಕೆ ಇದು ಒಂದು ಸ್ಯಾಂಪಲ್ ಅಷ್ಟೆ.
 
ಖಾಸಗಿ ವೈದ್ಯ ಕಾಲೇಜುಗಳನ್ನು ಉದ್ಧಾರ ಮಾಡುವ ಹುನ್ನಾರ
 
ಖಾಸಗಿ ವೈದ್ಯ ಕಾಲೇಜುಗಳನ್ನು ಉದ್ಧಾರ ಮಾಡುವ ಹುನ್ನಾರ ಇದರ ಹಿಂದೆ ಇದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಯಾವ ಕಾರಣಕ್ಕೂ 112 DNB ಸೀಟುಗಳನ್ನು ವಾಪಸ್ ಕೊಡಬಾರದಿತ್ತು. ಅವುಗಳನ್ನು ಇತರೆ ಅರ್ಹ ಅಭ್ಯರ್ಥಿಗಳಿಗೆ ಕೊಡಬಹುದಿತ್ತು. ಹಾಗೆ ಮಾಡಿದ್ದಿದ್ದರೆ ರಾಜ್ಯದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಶಕ್ತಿಯೇ ಬರುತ್ತಿತ್ತು.
 
ನೀಟ್ ಕಾರಣಕ್ಕೆ ಈಗಾಗಲೇ ಬಡ ಮಧ್ಯಮ ವರ್ಗದ ಮಕ್ಕಳಿಗೆ ವೈದ್ಯಶಿಕ್ಷಣ ಗಗನ ಕುಸುಮವಾಗಿದೆ. ಇದಕ್ಕೆ ಪೂರಕವಾಗಿ ಸರಕಾರವು ತಜ್ಞವೈದ್ಯ ಕೋರ್ಸುಗಳ ವಿಚಾರದಲ್ಲಿ ಹಣವಂತರಿಗೆ ಜೈ ಎನ್ನುತ್ತಿದೆ. ಇದು ಘೋರ ಅನ್ಯಾಯ ಮಾತ್ರವಲ್ಲ, ಜನದ್ರೋಹಿ ಹೆಜ್ಜೆ. ಕರ್ನಾಟಕಕ್ಕೆ ಬಹುದೊಡ್ಡ ನಷ್ಟ.
 
ಕ್ಷಮತೆಯುಳ್ಳ ವೈದ್ಯರನ್ನು ಪಡೆಯೋ ಗುರಿ ಇಲ್ಲ
 
ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ವೇಳೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕೊರತೆ ವಿಪರೀತ ಎನ್ನುವಷ್ಟು ಇತ್ತು. ಸಕಾಲಕ್ಕೆ ಚಿಕಿತ್ಸೆ ಸಿಗದೇ ಅನೇಕರು ಜೀವ ಚೆಲ್ಲಿದ್ದರು. ಹೀಗಿದ್ದರೂ ನುರಿತ, ಕ್ಷಮತೆಯುಳ್ಳ ವೈದ್ಯರನ್ನು ಪಡೆಯುವ ಹೆಗ್ಗುರಿ ರಾಜ್ಯ ಸರಕಾರಕ್ಕೆ ಇಲ್ಲ.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ