ರಾಜ್ಯ ಸರ್ಕಾರದ ನಡೆ ಹೊಗಳಿ, ಸೋನಿಯಾ ಗಾಂಧಿಯನ್ನು ಟೀಕಿಸಿದ ಎಚ್ ವಿಶ್ವನಾಥ್, ಕಾರಣವೇನು

Sampriya

ಗುರುವಾರ, 12 ಡಿಸೆಂಬರ್ 2024 (17:44 IST)
Photo Courtesy X
ಮೈಸೂರು: ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ದಿವಂಗತ ಎಸ್‌ಎಂ ಕೃಷ್ಣ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಅವರಿಗೆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸಂತಾಪ ಸೂಚಿಸಲಿಲ್ಲವೇಕೆ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ನಮ್ಮ ಪಕ್ಷದವರಲ್ಲ, ಸತ್ತಾಗಲೂ ದ್ವೇಷ ಮಾಡಬೇಕು ಎಂಬ ಮನಸ್ಥಿತಿಯನ್ನು ರಾಜಕಾರಣಿಗಳು ಬಿಡಬೇಕು. ರಾಜಕಾರಣವನ್ನು ಸಾವಿನಲ್ಲೂ ಪ್ರದರ್ಶಿಸುವುದು ಸರಿಯಲ್ಲ ಎಂದರು.

ಆದರೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರ ಎಸ್‌ಎಂ ಕೃಷ್ಣ ಅವರಿಗೆ ಗೌರವಯುತವಾದ ವಿದಾಯ ಹೇಳುವಲ್ಲಿ ಮಾದರಿಯಾಗಿ ನಡೆದುಕೊಂಡಿದೆ. ಇದಕ್ಕಾಗಿ ಮುಖ್ಯಮಂತ್ರಿ, ಡಿಸಿಎಂ ಡಿ.ಕೆ. ಶಿವಕುಮಾರ್, ಇಡೀ ಮಂತ್ರಿ‌ ಮಂಡಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಲ್ಲಿಸಿದರು. ಆದರೆ, ಸೋನಿಯಾ ಗಾಂಧಿ ಸಂತಾಪ ವ್ಯಕ್ತಪಡಿಸಿಲ್ಲ. ರಾಜಕಾರಣದಲ್ಲಿ ಇಂಥಾದ್ದು ನಡೆಯಬಾರದು. ಏಕೆ ಅವರು ಕಾಂಗ್ರೆಸ್‌ಗೆ ದುಡಿಯಲಿಲ್ಲವೇ ಎಂದು ಪ್ರಶ್ನಿಸಿದರು.

ಇನ್ನೂ ಐಟಿ ಬಿಟಿ, ಇನ್ಫೊಸಿಸ್‌ ಸಂತಾಪ ಸೂಚಿಸಿಲ್ಲ. ಯಾರಾದರೂ ತೀರಿಕೊಂಡರೆ ಅವರನ್ನು ವ್ಯಕ್ತಿತ್ವ, ಕೆಲಸ ಹಾಗೂ ಕೊಡುಗೆ ಮುಖ್ಯ ಆಗಬೇಕೇ ಹೊರತು ದ್ವೇಷವಲ್ಲ. ಐಟಿ ಬಿಟಿಯವರು, ಇನ್ಫೊಸಿಸ್ ಮೊದಲಾದ ಕಂಪನಿಗಳು ಸಂತಾಪ ಸೂಚಿಸಬೇಕಿತ್ತಲ್ಲವೇ? ಇವರೆಲ್ಲರೂ ಯಾರಿಂದ ಬೆಳೆದರು? ನಾವೆಲ್ಲರೂ ಮನುಷ್ಯತ್ವ ಕಳೆದುಕೊಂಡು ಬಿಟ್ಟಿದ್ದೇವೆಯೇ ಎಂದು ಪ್ರಶ್ನೆ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ