ಮದ್ದೂರು: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಇಂದು ಸೋಮನಹಳ್ಳಿಯ ತಮ್ಮ ಹುಟ್ಟೂರಿನ ಮಣ್ಣಲ್ಲಿ ಮಣ್ಣಾಗಿ ಹೋದರು. ಅವರ ಅಂತಿಮ ಕ್ರಿಯೆಯನ್ನು ಮೊಮ್ಮಗ ಅಮರ್ಥ್ಯ ಹೆಗ್ಡೆ ನೆರವೇರಿಸಿದರು.
ಬೆಂಗಳೂರಿನಿಂದ ಇಂದು ಸೋಮನಹಳ್ಳಿಗೆ ಎಸ್ಎಂ ಕೃಷ್ಣ ಮೃತದೇಹವನ್ನು ಅಂತಿಮ ಯಾತ್ರೆ ಮೂಲಕ ಕರೆತರಲಾಯಿತು. ಬಳಿಕ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರೀ ಗೌರವಗಳೊಂದಿಗೆ ಅವರ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಮೊಮ್ಮಗ ಅಮರ್ಥ್ಯ ಕಾರ್ಯಕ್ರಗಳನ್ನು ನೆರವೇರಿಸಿದರು.
ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಕ್ರಿಯೆಗಳು ನೆರವೇರಿದವು. ಸರ್ಕಾರೀ ಗೌರವದ ಬಳಿಕ ರಾಷ್ಟ್ರಧ್ವಜವನ್ನು ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಹಸ್ತಾಂತರಿಸಿದರು. ಬಳಿಕ ಎಸ್ಎಂ ಕೃಷ್ಣ ಮೃತದೇಹವನ್ನು ಹೂವಿನ ಪಲ್ಲಕ್ಕಿಯಲ್ಲಿ ಕರೆತಂದು ಗಂಧದ ತುಂಡುಗಳಿಂದ ಸಿದ್ಧಪಡಿಸಿದ್ದ ಚಿತೆಯ ಮೇಲಿರಿಸಲಾಯಿತು.
ಬಳಿಕ ಕುಟುಂಬಸ್ಥರು ಕೊನೆಯ ಬಾರಿಗೆ ಅವರ ಮುಖ ನೋಡಿ ನಮನ ಸಲ್ಲಿಸಿದರು. ಬಳಿಕ ಅಮರ್ಥ್ಯ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ಕ್ರಿಯೆ ನೆರವೇರಿಸಿದರು. ಅಂತಿಮ ಕ್ರಿಯೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್, ಸಚಿವ ಚೆಲುವರಾಯಸ್ವಾಮಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎಚ್ ಡಿ ಕುಮಾರಸ್ವಾಮಿ, ಸಂಸದ ಡಾ ಸಿ ಸುಧಾಕರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾದರು.