ಬಿಎಸ್ವೈಗೆ ಸಂಕಷ್ಟ: ಡೀನೋಟಿಫಿಕೇಶನ್ ಕೇಸ್

ಶನಿವಾರ, 3 ಜುಲೈ 2021 (18:58 IST)
ಬೆಂಗಳೂರು (ಜುಲೈ 03): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಡೀನೋಟಿಫಿಕೇಶನ್ ಭೂತ ಮುತ್ತಿಕೊಂಡಿದೆ. ಬೆಳ್ಳಂದೂರು ಡೀನೋಟಿಫಿಕೇಶನ್ ಪ್ರಕರಣದ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿದೆ. ವಾಸುದೇವ ರೆಡ್ಡಿ ಎಂಬುವರು ಸಲ್ಲಿಸಿದ ದೂರನ್ನು ಪರಿಗಣಿಸಿ ವಿಶೇಷ ಕೋರ್ಟ್  ನಿರ್ಧಾರಕ್ಕೆ ಬಂದಿದೆ. 























ಲೋಕಾಯುಕ್ತ ಪೊಲೀಸರು  ಹಿಂದೆ  ಪ್ರಕರಣದಲ್ಲಿ ಬಿ ರಿಪೋರ್ಟ್ ನೀಡಿದ್ದರು. ಇದರಿಂದ ಯಡಿಯೂರಪ್ಪ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ, ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್  ಪ್ರಕರಣದ ತನಿಖೆಗೆ ಆದೇಶಿಸಿರುವುದು ಸಿಎಂಗೆ ಮತ್ತೆ ಸಂಕಷ್ಟ ಎದುರಾಗುವಂತಾಗಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ತಿರಸ್ಕರಿಸಿದ ನ್ಯಾಯಾಲಯ, ಯಾವುದೇ ವಿಳಂಬ ಇಲ್ಲದೇ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ಪಿಗೆ ಸೂಚಿಸಿದೆ.

ಏನಿದು ಪ್ರಕರಣ?
2000-01ರಲ್ಲಿ ಐಟಿ ಪಾರ್ಕ್ ಗೆಂದು ಕೆಐಎಡಿಬಿ ಬೆಳ್ಳಂದೂರು, ದೇವರ ಬೀಸನಹಳ್ಳಿಯಲ್ಲಿ ಭೂಸ್ವಾಧೀನ ಮಾಡಿತ್ತು. ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದಾಗ 4.30 ಎಕರೆಯಷ್ಟು ಜಾಗವನ್ನು ಡೀನೋಟಿಫೈ ಮಾಡಿದ್ದರು.
2013ರಲ್ಲಿ ವಾಸುದೇವ ರೆಡ್ಡಿ ಅವರು ಲೋಕಾಯುಕ್ತದಲ್ಲಿ ಖಾಸಗಿ ದೂರು ನೀಡಿದ್ದರು. ಆದರೆ, 2021, ಜನವರಿಯಲ್ಲಿ ಲೋಕಾಯುಕ್ತ ಪೊಲೀಸರು ವಾಸುದೇವ ರೆಡ್ಡಿ ಸಲ್ಲಿಸಿದ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಇದೀಗ ಈ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ಸ್ಪೆಷಲ್ ಕೋರ್ಟ್ ತಿರಸ್ಕರಿಸಿ ತನಿಖೆಗೆ ಆದೇಶಿಸಿದೆ.

ಇದೇ ವೇಳೆ, ಬಿ ಎಸ್ ಯಡಿಯೂರಪ್ಪ ಮೇಲೆ ಮತ್ತೊಂದು ಭ್ರಷ್ಟಾಚಾರದ ಪ್ರಕರಣ ನೆತ್ತಿಯ ಮೇಲೆ ಕತ್ತಿಯಂತೆ ತೂಗುತ್ತಿದೆ. ಯಡಿಯೂರಪ್ಪ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಯಡಿಯೂರಪ್ಪ ಅವರ ಕುಟುಂಬ ಸದಸ್ಯರಾದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಮೊಮ್ಮದ ಶಶಿಧರ್ ಮರಡಿ, ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಯಡಿಯೂರಪ್ಪರ ಮಗ 
ಅಳಿಯ ಸಂಜಯ್ ಶ್ರೀ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಇರುವ ಪ್ರಕರಣ ಇದ್ದು, ಮೊನ್ನೆ ಮೊನ್ನೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು ವಿಚಾರಣೆ ನಡೆಸಿತು. ಪ್ರಕರಣದ ತನಿಖೆ ನಡೆಸಬೇಕಾ ಅಥವಾ ಬೇಡವಾ ಎಂಬುದನ್ನು ಕೋರ್ಟ್ ಜುಲೈ 8ರಂದು ನಿರ್ಧರಿಸಲಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ