ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಡಿಕೆ ಶಿವಕುಮಾರ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ: ಎಚ್ ಡಿ ಕುಮಾರಸ್ವಾಮಿ

Krishnaveni K

ಸೋಮವಾರ, 15 ಏಪ್ರಿಲ್ 2024 (16:33 IST)
ಬೆಂಗಳೂರು: ತಮ್ಮ ಮೇಲೆ ಮಹಿಳೆಯರಿಗೆ ಅವಮಾನ ಮಾಡಿದ ಆರೋಪ ಬಂದ ಹಿನ್ನಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಷಾಧ ವ್ಯಕ್ತಪಡಿಸಿದ ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಾಯಕ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಕೆಲವು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆಸ್ತಿ ಗಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಡಿಕೆಶಿಗೆ ನನಗೆ ಬಿಡದಿಯಲ್ಲಿರುವುದು ಜಮೀನು ಮಾತ್ರ. ಆದರೆ ಡಿಕೆಶಿ ಎಷ್ಟು ಆಸ್ತಿ ಕಬಳಿಕೆ ಮಾಡಿಕೊಂಡಿದ್ದಾರೆ ಹೇಳಲಿ ಎಂದಿದ್ದಾರೆ.

ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಡಿಕೆಶಿ ಬೆದರಿಕೆ ಆರೋಪ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಪಾರ್ಟ್ಮೆಂಟ್ ನಿವಾಸಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
 
 
ಹೊಸ ಅಪಾರ್ಟ್ಮೆಂಟ್ ಅಕ್ಯೂಪೆನ್ಸಿ ಸರ್ಟಿಫಿಕೇಟ್ ಬೇಕಾದರೆ, NOC ಬೇಕಾದರೆ ನನ್ನ ತಮ್ಮನಿಗೆ ಮತ ಹಾಕಿ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ವೋಟು ಕೊಟ್ಟರೆ  ಕಾವೇರಿ ನೀರು ಬಿಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಮೇಲೆ ಆರೋಪ ಮಾಡಿದರು.
 
ನನಗೆ ಇರುವುದು ಬಿಡದಿ ಬಳಿ ಜಮೀನು ಮಾತ್ರ; ಡಿಕೆಶಿ ಯಾವ ಕಷ್ಟಪಟ್ಟು ಇಷ್ಟು ಆಸ್ತಿ ಸಂಪಾದಿಸಿದ್ದಾರೆ?
 
ಬೆಂಗಳೂರಿನ ಸುತ್ತಮುತ್ತ 1000 ಎಕರೆ ಕುಮಾರಸ್ವಾಮಿಗೆ ಜಮೀನು ಇದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿಗಳು; ಹೌದು.. ನನ್ನದು ಬಿಡದಿಯ ಬಳಿ 45-48 ಎಕರೆ ಭೂಮಿ ಇದೆ. ಸಿನಿಮಾದಲ್ಲಿ ದುಡಿದ ದುಡ್ಡಿನಲ್ಲಿ ಅದನ್ನು ಖರೀದಿ ಮಾಡಿದ್ದು. ರಾಜಕೀಯಕ್ಕೆ ಬರುವುದಕ್ಕೆ ಮೊದಲೇ ಈ ಜಾಮೀನು ಖರೀದಿ ಮಾಡಿದ್ದೇನೆ. ನಾನು ತೋಟದಲ್ಲಿ ರೆಸಾರ್ಟ್ ಮಾಡಿಲ್ಲ. ಬಂದು ನೋಡಪ್ಪ. ಕಲ್ಲಂಗಡಿ, ಬಾಳೆ, ಕೊಬ್ಬರಿ ಬೆಳೆದಿದ್ದೇನೆ. ಎಲ್ಲಾ ವಿಡಿಯೋ ಇದೆಯಪ್ಪ. ದೇವೇಗೌಡರು ವಿರೋಧ ಪಕ್ಷದಲ್ಲಿ ಇದ್ದಾಗಲೂ ನಿಕ್ಕರ್ ಹಾಕಿಕೊಂಡು ಶನಿವಾರ, ಭಾನುವಾರ ತೋಟದ ಕೆಲಸ ಮಾಡುತ್ತಿದ್ದರು ಎಂದರು.
 
 
ಡಿ.ಕೆ.ಶಿವಕುಮಾರ್ ಯಾವ ಕಷ್ಟಪಟ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ? ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸಿರೋದೇ ಅವರ ಕೆಲಸ. ಹೇಳಿದರೆ ಆ ವ್ಯಕ್ತಿಯ ಬಗ್ಗೆ ಕಂತೆ ಕಂತೆ ಹೇಳಬಹುದು. ಅವರಿಗೆ ನನ್ನದೇ ಆಪತ್ತು. ಅದಕ್ಕೆ ನನ್ನ ವಿರುದ್ದ ಮಾತಾಡ್ತಿದ್ದಾರೆ. 8 ಒಕ್ಕಲಿಗರಿಗೆ ಸೀಟು ಕೊಟ್ಟಿದ್ದೀನಿ ಅಂತಾರೆ. ಕೊಟ್ಟು ಏನ್ ಆಯ್ತು. ಸಿಎಂ ಆಗೋ ಅವಕಾಶ ಇದೆ, ಆಶೀರ್ವಾದ ಮಾಡಿ ಅಂದರು. ಈಗ ಒಂದು ಸಾರಿ ಪೇಪರು ಪೆನ್ನು ಕೊಟ್ಟು ತಮಿಳುನಾಡಿಗೆ ನೀರು ಹೋಗ್ತಿಲ್ಲವಾ? ಈಗ ಮತ್ತೆ ಪೆನ್ನು ಪೇಪರ್ ಕೊಡಬೇಕಾ? ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
 
ಮಹಿಳಾ ಆಯೋಗ ದೂರು ದಾಖಲು ಮಾಡಿಕೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ; ಮಹಿಳಾ ಆಯೋಗ ನೊಟೀಸ್ ಕೊಡಲಿ ಉತ್ತರ ಕೊಡ್ತೀನಿ ಎಂದು ಉತ್ತರಿಸಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ