ಮಂಗಳೂರು: ಲೋಕಸಭೆ ಚುನಾವಣೆ 2024 ರ ಪ್ರಚಾರಕ್ಕಾಗಿ ನಿನ್ನೆ ಪ್ರಧಾನಿ ಮೋದಿ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲೂ ಜನ ಮೋದಿಗೆ ಹೂ ಮಳೆ ಸುರಿಸಿ ಸ್ವಾಗತ ಕೋರಿದ್ದರು.
ಮೋದಿ ಸ್ವಾಗತಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲೂ ಕರಾವಳಿ ಸಾಂಸ್ಕೃತಿಕ ಲೋಕವೇ ತೆರೆದು ನಿಂತಿತ್ತು. ಹುಲಿ ವೇಷ, ಯಕ್ಷಗಾನ, ಜಾನಪದ ನೃತ್ಯ ಮಾಡಿ ಮೋದಿಗೆ ಸ್ವಾಗತ ಕೋರಲಾಯಿತು. ಮೋದಿ ಸಾಗುವ ಹಾದಿ ಬದಿಯಲ್ಲಿ ಅಲ್ಲಲ್ಲಿ ಸ್ಟೇಜ್ ಹಾಕಲಾಗಿತ್ತು. ಅಲ್ಲಿ ಡ್ಯಾನ್ಸ್, ಯಕ್ಷಗಾನ, ಹುಲಿ ಡ್ಯಾನ್ಸ್ ಮಾಡಿ ಮೋದಿಗೆ ಸ್ವಾಗತ ಕೋರಲಾಗುತ್ತಿತ್ತು.
ಹುಲಿ ವೇಷ ಮಂಗಳೂರಿನ ವಿಶೇಷತೆ. ಪ್ರತಿಯೊಬ್ಬರತ್ತ ಮೋದಿ ಕೈ ಬೀಸಿ ಅಭಿನಂದನೆ ಸ್ವೀಕರಿಸುತ್ತಾ ಮುಂದೆ ಸಾಗಿದ್ದಾರೆ. ಕೆಲವೆಡೆ ತಾವೇ ಜನರತ್ತ ಹೂ ಮಳೆ ಸುರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವೇಳೆ ಅವರ ಜೊತೆ ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ದಕ್ಷಿಣ ಕನ್ನಡ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಇದ್ದರು.
ಮೋದಿ ಅತೀವ ದೈವ ಭಕ್ತ. ಹೀಗಾಗಿ ಮೋದಿಗಾಗಿಯೇ ವೇದಘೋಷಗಳನ್ನು ಮಾಡಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲದೆ, ಸಮೀಪದ ಕಟ್ಟಡಗಳಲ್ಲೂ ಜನ ನಿಂತು ಮೋದಿಯತ್ತ ಕೈ ಬೀಸುತ್ತಿದ್ದರು.