ಮಗ ನಿಖಿಲ್ ಕುಮಾರಸ್ವಾಮಿಗೆ ಪಟ್ಟು ಕಟ್ಟ ಹೊರಟ ಎಚ್ ಡಿ ಕುಮಾರಸ್ವಾಮಿಗೆ ಆರಂಭದಲ್ಲೇ ವಿಘ್ನ

Krishnaveni K

ಗುರುವಾರ, 2 ಜನವರಿ 2025 (16:00 IST)
ಬೆಂಗಳೂರು: ಜೆಡಿಎಸ್ ಪಕ್ಷದ ರಾಜ್ಯಾಧ್ಯ್ಷಕ ಸ್ಥಾನಕ್ಕೆ ತಮ್ಮ ಬಳಿಕ ಮಗ ನಿಖಿಲ್ ಕುಮಾರಸ್ವಾಮಿಗೆ ಪಟ್ಟ ಕಟ್ಟಲು ಹೊರಟಿದ್ದ ಎಚ್ ಡಿ ಕುಮಾರಸ್ವಾಮಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ನಿಖಿಲ್ ಕುಮಾರಸ್ವಾಮಿ ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿ ಮೂರೂ ಬಾರಿಯೂ ಸೋತಿದ್ದರು. ಅಲ್ಲದೆ, ರಾಜಕೀಯವಾಗಿ ಹೆಚ್ಚು ಅನುಭವವಿಲ್ಲ. ಹಾಗಿದ್ದರೂ ಕುಮಾರಸ್ವಾಮಿ ತಮ್ಮ ಪುತ್ರನಿಗೇ ರಾಜ್ಯದ ಜೆಡಿಎಸ್ ಚುಕ್ಕಾಣಿ ನೀಡುವ ಹವಣಿಕೆಯಲ್ಲಿದ್ದರು.

ಆದರೆ ನಿಖಿಲ್ ಗೆ ಪಟ್ಟ ಕಟ್ಟುವುದಕ್ಕೆ ಜೆಡಿಎಸ್ ನ ಹಿರಿಯ ನಾಯಕರಿಂದಲೇ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ನಿಖಿಲ್ ಇನ್ನೂ ಎಳಸು. ಆತನ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ಹಿರಿಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಅದರ ಬದಲಿಗೆ ಈಗ ಅಸಮಾಧಾನಗೊಂಡಿರುವ ಹಿರಿಯ ನಾಯಕ ಜಿಟಿ ದೇವೇಗೌಡಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ನೀಡಿ ಬಂಡೆಪ್ಪ ಕಾಶಂಪೂರ್ ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಅಲ್ಲದೆ ಮೊದಲೇ ಜೆಡಿಎಸ್ ಗೆ ಕುಟುಂಬ ರಾಜಕಾರಣದ ಹಣೆ ಪಟ್ಟಿಯಿದೆ. ಈಗ ನಿಖಿಲ್ ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಅದೇ ವಿಚಾರ ಮತ್ತೆ ಮುನ್ನಲೆಗೆ ಬರಲಿದೆ. ಮುಂದಿನ ಚುನಾವಣೆಯನ್ನು ಎದುರಿಸಲು ನಿಖಿಲ್ ನಂತಹ ಅನನುಭವಿಯ ಹೊರತಾಗಿ ಅನುಭವಿ ನಾಯಕನಿಗೆ ಮಣೆ ಹಾಕಬೇಕು ಎಂಬುದು ಜೆಡಿಎಸ್ ನಾಯಕರ ಆಗ್ರಹವಾಗಿದೆ. ಹೀಗಾಗಿ ಪಕ್ಷದ ನಾಯಕರನ್ನೇ ಎದುರು ಹಾಕಿಕೊಂಡು ನಿಖಿಲ್ ಗೆ ಕುಮಾರಸ್ವಾಮಿ ಪಟ್ಟ ಕಟ್ಟುತ್ತಾರಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ