ಬಿ.ಎಲ್.ಸಂತೋಷ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ
ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೆಗೌಡರ ಕುಟುಂಬ, ಜಾತ್ಯತೀತ ಜನತಾದಳ ಹಾಗೂ ಪಂಚರತ್ನ ಯೋಜನೆಗಳ ಬಗ್ಗೆ ಲಘುವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಅವನ್ಯಾರೋ ಜೋಳಿಗೆ ಇಡ್ಕೊಂಡು ಓಡಾಡೋನು ಏನೋ ಹೇಳಿದ್ದಾನೆ. ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು? ಎಂದು ಸಂತೋಷ್ ಅವರನ್ನು ಪ್ರಶ್ನಿಸಿದರು. ಮಿಸ್ಟರ್ ಸಂತೋಷ್, ಲೂಟಿ ದರೋಡೆ ಮಾಡಿ ಕರ್ನಾಟಕ ಹಣವನ್ನ ಕೊಂಡೊಯ್ದಿದ್ದೀರಾ. ಸಂತೋಷವಾಗಿದ್ದೀರಂತೆ ಲೂಟಿ ಹೊಡೆದು. ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು, ವಾಮಾಚಾರ ಮಾಡುವವರಿಂದ ಹಣ ತೆಗೆದುಕೊಂಡು ಅಪರೇಶನ್ ಕಮಲ ಮಾಡಿ ನಮ್ಮ ಸರ್ಕಾರ ತೆಗೆದಿರಿ ಎಂದು ಸಂತೋಷ್ ವಿರುದ್ಧ ಕಿಡಿಕಾರಿದರು.