ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರಕ್ಕೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ಈಗ ಟಿಕೆಟ್ ಹಂಚಿಕೆ ವಿಚಾರವೇ ಮನಸ್ತಾಪಕ್ಕೆ ಕಾರಣವಾಗುವ ನಿರೀಕ್ಷೆಯಿದೆ.
ಇದೀಗ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜೆಡಿಎಸ್ ಗೆ ಬಿಜೆಪಿ ಮೊದಲು ಮೂರು ಸೀಟು ಬಿಟ್ಟುಕೊಡಲು ಮಾತುಕತೆ ನಡೆದಿತ್ತು. ಆ ಪೈಕಿ ಹಾಸನ ಮತ್ತು ಮಂಡ್ಯ ಟಿಕೆಟ್ ಜೆಡಿಎಸ್ ಗೆ ಫಿಕ್ಸ್ ಆಗಿದೆ. ಆದರೆ ಕೋಲಾರದಲ್ಲಿ ಟಿಕೆಟ್ ನೀಡಲು ಮೀನ ಮೇಷ ಎಣಿಸುತ್ತಿದೆ.
ಇದು ಕುಮಾರಸ್ವಾಮಿ ಬೇಸರಕ್ಕೆ ಕಾರಣವಾಗಿದೆ. ಕೇವಲ ಎರಡು ಸೀಟು ಕೊಡುವುದಾದರೆ ಇಷ್ಟೆಲ್ಲಾ ಸೀಟು ಹಂಚಿಕೆ, ಹೊಂದಾಣಿಕೆ ಮಾತುಕತೆ ಬೇಕಾ ಎಂದು ಕುಮಾರಸ್ವಾಮಿ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ನಮ್ಮ ಉದ್ದೇಶ ಕಾಂಗ್ರೆಸ್ ನನ್ನು ಎಲ್ಲಾ 28 ಕ್ಷೇತ್ರಗಳಲ್ಲಿ ಸೋಲಿಸಬೇಕು ಎಂದು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಕ್ತಿ ಕಡಿಮೆಯಿದೆ. ಅಲ್ಲಿ ನಮ್ಮನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಬಿಜೆಪಿ ಯೋಜನೆ ರೂಪಿಸಬೇಕು ಎಂದಿದ್ದಾರೆ.
ಮೈತ್ರಿಯಿಂದ ಜೆಡಿಎಸ್ ಗೆ ಹೆಚ್ಚು ಲಾಭವಾಗಿಲ್ಲ ಎಂದು ನಮ್ಮ ಮುಖಂಡರ ಬಳಿ ಅಸಮಾಧಾನವಿದೆ. ಅದನ್ನು ಸರಿಪಡಿಸಬೇಕು. ನಮ್ಮನ್ನು ಕಡೆಗಣಿಸಿದರೆ ಅದರ ಸಾಧಕ ಬಾಧಕಗಳಿಗೆ ಅವರೇ ಜವಾಬ್ಧಾರಿಯಾಗಬೇಕಾಗುತ್ತದೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.