ಬೆಂಗಳೂರು: ವಿಧಾನಸಭೆಯಲ್ಲಿ ತಮ್ಮಿಬ್ಬರು ಮಕ್ಕಳ ಬಂಧನದ ಬಗ್ಗೆ ಚರ್ಚೆಯಾಗುತ್ತಿದ್ದಂತೇ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಭಾವುಕರಾದ ಘಟನೆ ನಡೆದಿದೆ. ಈ ಬಗ್ಗೆ ಅವರು ರೋಷಾವೇಷದಿಂದಲೇ ಸದನದಲ್ಲಿ ಮಾತನಾಡಿದ್ದಾರೆ.
ವಿಧಾನಸಭೆಯಲ್ಲಿ ಎಚ್ ಡಿ ರೇವಣ್ಣ ಬಂಧನಕ್ಕೊಳಗಾದ ಸುದ್ದಿ ಚರ್ಚೆಗೆ ಬಂದಿದೆ. ಈ ವೇಳೆ ಅವರು ಸಿಟ್ಟಿಗೆದ್ದರು. ಇದೇ ಆಕ್ರೋಶದಿಂದ ಮಾತನಾಡಿದ ಅವರು ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ, ಬೇಡ ಎನ್ನಲ್ಲ. ನಾನು ಯಾರನ್ನೂ ವಹಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ ಎನ್ನುತ್ತಾ ಭಾವುಕರಾದರು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧಿತರಾಗಿದ್ದರೆ,ಇನ್ನೊಬ್ಬ ಪುತ್ರ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ನನ್ನ ಮೇಲೆ ಯಾರೋ ಏನೋ ಆರೋಪ ಮಾಡ್ತಾರೆ. ಮಹಿಳೆಯನ್ನೇ ಡಿಜಿ ಕಚೇರಿಗೆ ಕರೆಸಿ ಆಕೆಯಿಂದ ಡಿಜಿಯೇ ದೂರು ಬರೆಸಿಕೊಳ್ಳುತ್ತಾರೆ ಎಂದರೆ ಆತ ಡಿಜಿ ಆಗಲು ಲಾಯಕ್ಕಾ ಎಂದು ಆಕ್ರೋಶದಿಂದಲೇ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅಷ್ಟೊಂದು ಅನ್ಯಾಯವಾಗಿದ್ದರೆ ನೋಟಿಸ್ ಕೊಡಿ, ಚರ್ಚೆ ಮಾಡೋಣ ಎಂದರು. ವಿಪಕ್ಷ ನಾಯಕ ಆರ್ ಅಶೋಕ್ ರೇವಣ್ಣ ಪ್ರಕರಣ ಮತ್ತು ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಎಸ್ ಐಟಿ ತಂಡದ ಕಾರ್ಯನಿರ್ವಹಣೆ ಬಗ್ಗೆ ಟೀಕೆ ಮಾಡಿದರು. ರೇವಣ್ಣ ಪ್ರಕರಣದಲ್ಲಿ ನೋಟಿಸ್ ನೀಡಿದ ಎರಡೇ ದಿನಕ್ಕೆ ಬಂಧನ ಮಾಡುವಷ್ಟು ಎಸ್ ಐಟಿ ಸ್ಟ್ರಾಂಗ್ ಆಗಿತ್ತು. ಆದರೆ ವಾಲ್ಮೀಕಿ ಹಗರಣದಲ್ಲಿ ಎಸ್ ಐಟಿ ಇನ್ನೂ ನೋಟಿಸ್ ಕೂಡಾ ಕೊಟ್ಟಿಲ್ಲ. ಮಾಜಿ ಶಾಸಕ ಪ್ರೀತಂ ಗೌಡ ಕೇಸ್ ನಲ್ಲೂ ಇದೇ ಆಗಿತ್ತು. ಈ ಕೇಸ್ ನಲ್ಲಿ ಯಾಕೆ ಎಸ್ಐಟಿ ಅಷ್ಟೊಂದು ಚುರುಕಾಗಿಲ್ಲ ಎಂದು ಪ್ರಶ್ನೆ ಮಾಡಿದರು.