T20 ವಿಶ್ವಕಪ್ ಗೆಲ್ಲಿಸಿಕೊಟ್ಟ ಕೋಚ್ ರಾಹುಲ್ ದ್ರಾವಿಡ್ ಗೆ ಕೊನೆಗೂ ಕರ್ನಾಟಕದಿಂದ ಗೌರವ

Krishnaveni K

ಸೋಮವಾರ, 15 ಜುಲೈ 2024 (14:05 IST)
ಬೆಂಗಳೂರು: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ ಕರ್ನಾಟಕದವರೇ ಆದ ಕೋಚ್ ರಾಹುಲ್ ದ್ರಾವಿಡ್ ಗೆ ಕೊನೆಗೂ ಸದನದಲ್ಲಿ ಗೌರವ ಸಿಕ್ಕಿದೆ.

ಟೀಂ ಇಂಡಿಯಾ ವಿಶ್ವಕಪ್ ಗೆದ್ದು ತವರಿಗೆ ಬಂದಾಗ ಪ್ರಧಾನಿ ಮೋದಿ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ಭಾರತೀಯ ತಂಡವನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸನ್ಮಾನಿಸಿದ್ದರು. ಅದಾದ ಬಳಿಕ ಎಲ್ಲಾ ಕ್ರಿಕೆಟಿಗರನ್ನೂ ಆಯಾ ರಾಜ್ಯದ ಸರ್ಕಾರಗಳು ಬಹುಮಾನ ನೀಡಿ ಗೌರವಿಸಿತ್ತು.

ಆದರೆ ಕರ್ನಾಟಕ ಸರ್ಕಾರ ಮಾತ್ರ ರಾಹುಲ್ ದ್ರಾವಿಡ್ ಗೆ ಕನಿಷ್ಠ ಅಧಿಕೃತವಾಗಿ ಸನ್ಮಾನಿಸುವ ಗೋಜಿಗೂ ಹೋಗಲಿಲ್ಲ ಎಂಬ ವಿಚಾರ ಟೀಕೆಗೊಳಗಾಗಿತ್ತು. ದ್ರಾವಿಡ್ ಜೊತೆಗೆ ಭಾರತ ತಂಡದಲ್ಲಿ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ರಾಘವೇಂದ್ರಗೂ ಸನ್ಮಾನ ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು ಮೊದಲ ದಿನವೇ ಈ ವಿಚಾರವನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಸ್ತಾಪಿಸಿದ್ದಾರೆ. ಸಭಾಧ್ಯಕ್ಷರಲ್ಲಿ ಒಂದು ಮನವಿ, ಟಿ20 ವಿಶ್ವಕಪ್ ಗೆಲುವಿನಲ್ಲಿ ನಮ್ಮ ಕರ್ನಾಟಕದವರೇ ಆದ ರಾಹುಲ್ ದ್ರಾವಿಡ್ ಅವರ ಕೊಡುಗೆಯೂ ಅಪಾರ. ಹೀಗಾಗಿ ಇಡೀ ಸದನದ ಪರವಾಗಿ ಅವರಿಗೆ ಒಂದು ಅಭಿನಂದನೆ ಸಲ್ಲಿಸಬೇಕು ಎಂದು ಕೋರಿದರು. ಇದಕ್ಕೆ ಎಲ್ಲಾ ಸದಸ್ಯರು ಮೇಜು ತಟ್ಟಿ ತಮ್ಮ ಸಹಮತ ವ್ಯಕ್ತಪಡಿಸಿದರು. ಆಗ ಸ್ಪೀಕರ್ ಖಾದರ್ ‘ಇದನ್ನು ಮಾಡಬೇಕು ಎಂದು ನಾವು ಅಂದುಕೊಂಡಿದ್ದೇವೆ. ಸಂತಾಪ ನಿಲುವಳಿ ಬಳಿಕ ದ್ರಾವಿಡ್ ಗೆ ಅಭಿನಂದನೆ ಸಲ್ಲಿಸಲಿದ್ದೇವೆ. ವಿಷಯ ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು’ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ