ರಾಮನಗರ(ಆ.23): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಇದರ ಜೊತೆಗೆ ರಾಮನಗರ ಜಿಲ್ಲೆಯಲ್ಲಿಯೂ ಸಹ ಪಕ್ಷ ಸಂಘಟನೆಗೆ ಒತ್ತು ನೀಡಿರುವ ಕುಮಾರಸ್ವಾಮಿ ಈಗ ಫುಲ್ ಅಲರ್ಟ್ ಆಗಿದ್ದಾರೆ. 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತಂದು ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣ್ತಿದ್ದಾರೆ ಕುಮಾರಸ್ವಾಮಿ.
ಅಬ್ಬರ ಮಾಡದೇ ಸೈಲೆಂಟ್ ವರ್ಕ್, ಹೆಚ್.ಡಿ.ಕೆ ಗೇಮ್ ಪ್ಲ್ಯಾನ್
ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಕುಮಾರಸ್ವಾಮಿ ಕ್ಷೇತ್ರದ ಶಾಸಕರಾದ ಬಳಿಕ ಚನ್ನಪಟ್ಟಣ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಕಾರ್ಯಗಳು ಸದ್ದಿಲ್ಲದೆ ನಡೆಯುತ್ತಿವೆ. ಪ್ರಮುಖವಾಗಿ ಕ್ಷೇತ್ರದ ಪ್ರತಿ ಹಳ್ಳಿಯ ರಸ್ತೆಗಳು ಅಭಿವೃದ್ಧಿ ಕಾಣ್ತಿವೆ. ಇದರ ಜೊತೆಗೆ ಮೂಲಭೂತ ಸೌಕರ್ಯಗಳ ಪೂರೈಕೆಯಲ್ಲಿಯೂ ಸಹ ಕುಮಾರಸ್ವಾಮಿ ಅಧಿಕಾರಿಗಳ ಮೇಲೆ ಒತ್ತಡ ತಂದು ಕೆಲಸ ಮಾಡಿಸುತ್ತಿದ್ದಾರೆ. ಆದರೆ ಅಧಿಕಾರಿಗಳ ವರ್ಗದಲ್ಲಿ ಕೆಲವರು ಲಂಚ ಪಡೆಯುವ ಮೂಲಕ ಜನರಿಗೆ ತೊಂದರೆ ಕೊಡ್ತಿದ್ದಾರೆಂಬ ಚರ್ಚೆಯೂ ಸಹ ಹೆಚ್ಚಾಗಿ ನಡೆಯುತ್ತಿದ್ದು ಈ ಬಗ್ಗೆ ಕುಮಾರಸ್ವಾಮಿರವರು ಗಮನಹರಿಸಬೇಕಿದೆ. ಸತ್ತೆಗಾಲ ನೀರಾವರಿ ಯೋಜನೆಯಿಂದ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕನಸಿನ, ಮಹತ್ವಾಕಾಂಕ್ಷೆಯ ಯೋಜನೆ ಅಂದರೆ ಅದು ಸತ್ತೆಗಾಲ ನೀರಾವರಿ ಯೋಜನೆ. ಆದರೆ ಈ ವಿಚಾರವಾಗಿ ಕುಮಾರಸ್ವಾಮಿ ಯಾವುದೇ ಪ್ರಚಾರ ಪಡೆಯದೇ ಅಚ್ಚುಕಟ್ಟಾಗಿ ತಮ್ಮ ಕೆಲಸವನ್ನ ಮಾಡ್ತಿದ್ದಾರೆ. ಈಗಾಗಲೇ ಶೇ. 50% ಕೆಲಸಕಾರ್ಯಗಳು ಮುಗಿದಿದ್ದು, ಇನ್ನುಳಿದ ಕೆಲಸವನ್ನ ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಕಳೆದ ಕೆಲದಿನಗಳ ಹಿಂದೆ ಸ್ವತ: ಕುಮಾರಸ್ವಾಮಿ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಯೋಜನೆಯಿಂದಾಗಿ ಜಿಲ್ಲೆಯ ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ ತಾಲೂಕಿಗೆ ಶಾಶ್ವತವಾದ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ. ಇನ್ನು ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಈ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಯ ಹಿಂದೆ ಅಂದಿನ ಜಲಸಂಪನ್ಮೂಲ ಸಚಿವ ಹಾಗೂ ಈಗಿನ ಹಾಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಶ್ರಮವೂ ಹೆಚ್ಚಾಗಿದೆ ಅನ್ನೋದನ್ನ ಯಾರೂ ಮರೆಯುವಂತಿಲ್ಲ. ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಹೆಚ್.ಡಿ.ಕೆ ಭಾಗಿ
ರಾಮನಗರ ಜಿಲ್ಲೆಯ ಜೊತೆಗೆ ಹಳೇಮೈಸೂರು ಭಾಗದಲ್ಲಿ ಇನ್ನು ಹೆಚ್ಚಿನದಾಗಿ ಜೆಡಿಎಸ್ ಪಕ್ಷದ ಸಂಘಟನೆ ಮಾಡಬೇಕೆಂಬ ಮುಂದಾಲೋಚನೆ ಹೊಂದಿರುವ ಕುಮಾರಸ್ವಾಮಿ ಭರ್ಜರಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದ ಕುಮಾರಸ್ವಾಮಿ ಈಗ ರಾಮನಗರ ಜಿಲ್ಲೆಯ ಬಿಡದಿಯ ತಮ್ಮ ತೋಟದ ಮನೆಯಲ್ಲಿಯೇ ವಾಸವಾಗಿದ್ದಾರೆ. ಪ್ರತಿದಿನವೂ ಸಹ ತೋಟದ ಮನೆಗೆ ಬರುವ ರಾಮನಗರ, ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರನ್ನ ಭೇಟಿ ಮಾಡಿ ಕಷ್ಟಸುಖ ಕೇಳ್ತಿದ್ದಾರೆ. ಕಾರ್ಯಕರ್ತರಿಗಾಗಿ ಪ್ರತ್ಯೇಕ ಕಚೇರಿ ತೆರೆದಿರುವ ಕುಮಾರಸ್ವಾಮಿ ತಳಮಟ್ಟದಿಂದ ಪಕ್ಷವನ್ನ ಸಂಘಟನೆ ಮಾಡಲು ನಿರ್ಧಾರ ಮಾಡಿಕೊಂಡಿದ್ದಾರೆ.
ಇನ್ನು ರಾಮನಗರ, ಚನ್ನಪಟ್ಟಣದಲ್ಲಿ ಯಾವ ಕಾರ್ಯಕರ್ತನ ಮನೆಯಲ್ಲಿ ಏನೇ ಕಾರ್ಯ ನಡೆದರೂ ಸಹ ಆಹ್ವಾನ ನೀಡಿದರೆ ತಪ್ಪದೇ ಕುಮಾರಸ್ವಾಮಿ ಹಾಜರಾಗುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಣ್ಣ ನಮ್ಮ ಕಾರ್ಯಕ್ರಮಗಳಿಗೆ ಬರಲ್ಲ ಎನ್ನುತ್ತಿದ್ದ ಕಾರ್ಯಕರ್ತರ ಆರೋಪಕ್ಕೆ ಕುಮಾರಸ್ವಾಮಿ ಈಗ ಕಾರ್ಯಕರ್ತರ ಕಾರ್ಯಕ್ರಮಗಳಿಗೆ ಭೇಟಿ ಕೊಡುವ ಮೂಲಕ ಸಮಾಧಾನಪಡಿಸುತ್ತಿದ್ದಾರೆ.
ಇದನ್ನೇ ನೆಪವಾಗಿ ಇಟ್ಟುಕೊಂಡು ಪಕ್ಷ ಸಂಘಟನೆಯ ಜೊತೆಗೆ ಕಾರ್ಯಕರ್ತರಲ್ಲಿ ಉಂಟಾಗಿರುವ ಕೆಲ ಭಿನ್ನಾಭಿಪ್ರಾಯಗಳನ್ನು ಸಹ ಶಮನ ಮಾಡ್ತಿದ್ದಾರೆ. ಈ ಹಿನ್ನೆಲೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸೈಲೆಂಟ್ ಆಗಿಯೇ ಪಕ್ಷದ ಕಾರ್ಯಕರ್ತರು ಹಾಗೂ ತಮ್ಮ ಹಿಡಿತವನ್ನ ಕಾಪಾಡಿಕೊಳ್ತಿದ್ದಾರೆ