ಅಧಿಕಾರಕ್ಕೆ ಬಂದ್ಮೇಲೆ ನಿರ್ಧಾರ; ಜಿ. ಪರಮೇಶ್ವರ್

ಸೋಮವಾರ, 16 ಆಗಸ್ಟ್ 2021 (17:06 IST)
ಬೆಂಗಳೂರು (ಆಗಸ್ಟ್ 16); ಕರ್ನಾಟಕದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇದೆ. ಆದರೆ, ಅಷ್ಟರಲ್ಲೇ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು? ಎಂಬ ಚರ್ಚೆ ಗರಿಗೆದರಿದೆ. ಸಿಎಂ ಸ್ಥಾನಕ್ಕೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣಗಳು ಪರಿಸ್ಪರ ಕಿತ್ತಾಟ ನಡೆಸುತ್ತಿರುವಾಗಲೇ, ಡಾ.ಜಿ. ಪರಮೇಶ್ವರ್ ಸಹ ದಲಿತ ಸಿಎಂ ಕೋಟಾದ ಅಡಿಯಲ್ಲಿ ರಾಜ್ಯದ ಅಧಿಕಾರದ ಗದ್ದುಗೆಗೆ ಏರಲು ಸದ್ದಿಲದೆ ಕಾರ್ಯತಂತ್ರ ರೂಪಿಸುತ್ತಿರುವುದು ಸಳ್ಳೇನಲ್ಲ.

ಆದರೆ, ಈ ಬಗ್ಗೆ ಇಂದು ಬಹಿರಂಗ ಹೇಳಿಕೆ ನೀಡಿರುವ ಅವರು, "ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅನ್ನೋ ಸಂಸ್ಕೃತಿ ಇಲ್ಲ. ಅಧಿಕಾರಕ್ಕೆ ಬಂದ್ಮೇಲೆ ಹೈಕಮಾಂಡ್ ನಿರ್ಧಾರ ಮಾಡಲಿದೆ" ಎಂದು ಹೇಳುವ ಮೂಲಕ ನುಣುಚಿಕೊಂಡಿದ್ದಾರೆ.
ಮಾಜಿ ಸಚಿವ ಜಮೀರ್ ಅಹ್ಮದ್ ಭೇಟಿ ನಂತರ "ನೀವು ಸಿಎಂ ಆಕಾಂಕ್ಷಿ ಅಲ್ವಾ?" ಎಂಬ  ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿರುವ ಜಿ. ಪರಮೇಶ್ವರ್, "ಕಾಂಗ್ರೆಸ್ ಪಕ್ಷ ಮೊದಲು ಅಧಿಕಾರಕ್ಕೆ ಬರಲಿ. ಅಧಿಕಾರಕ್ಕೆ ಬಂದ ಮೇಲೆ ನಿರ್ಧಾರ ಆಗಲಿದೆ. ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅನ್ನೋ ಸಂಸ್ಕೃತಿ ಇಲ್ಲ. ಅಧಿಕಾರಕ್ಕೆ ಬಂದ್ಮೇಲೆ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡಲಿದೆ. ಈಗ ಅಂಥ ಯಾವುದೇ ಪ್ರಶ್ನೆಗಳು ಉದ್ಭವಿಸಲ್ಲ" ಎಂದು ಹೇಳಿಕೆ ನೀಡಿದ್ದಾರೆ.
"ರಾಜಕಾರಣದಿಂದ ನಾನು ದೂರ ಆಗಿಲ್ಲ, ತುಮಕೂರಿನಲ್ಲಿದ್ದೇನೆ. ಬೆಂಗಳೂರಿನಲ್ಲಿ ಪಕ್ಷದ ಕೆಲಸಗಳಿದ್ದಾಗ ಬರ್ತೀನಿ. ದಲಿತ ಬ್ರಿಗೇಡ್ ಬಗ್ಗೆ ನನಗೇನೂ ಗೊತ್ತಿಲ್ಲ. ಈಗ ಸಿಎಂ ಆಕಾಂಕ್ಷಿ ಬಗ್ಗೆ ಪ್ರಶ್ನೆಯೇ ಉದ್ಭವಿಸಲ್ಲ. ಮೊದಲು ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬರಬೇಕು. ಅಧಿಕಾರಕ್ಕೆ ಬಂದ್ಮೇಲೆ ಶಾಸಕರ ಅಭಿಪ್ರಾಯ ಕೇಳ್ತಾರೆ. ಆಮೇಲೆ ಸಿಎಂ ಯಾರು ಅನ್ನೋ ಬಗ್ಗೆ ನಿರ್ಧಾರ ಮಾಡಲಾಗುತ್ತದೆ" ಎಂದು ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಮನೆ ಮೇಲೆ ಐಟಿ ದಾಳಿಗೆ ಸಂಬಂಧಿಸಿದಂತೆಯೂ ಮಾತನಾಡಿರುವ ಜಿ. ಪರಮೇಶ್ವರ್, "ಜಮೀರ್ ನಮ್ಮ ಪಕ್ಷದ ಪ್ರಮುಖ ನಾಯಕರು. ಅವರ ಮನೆ ಮೇಲೆ ಐಟಿ , ಇಡಿ ದಾಳಿಗಳು ನಡೆದಿತ್ತು. ಹಾಗಾಗಿ ಇಂದು ಅವರನ್ನ ಮಾತನಾಡಿಸಯವ ಅಂತ ಬಂದಿದ್ದೇನೆ. ಭೇಟಿ ಮಾಡಿ ಇಬ್ಬರು ಮಾತುಕತೆ ಮಾಡಿದ್ವಿ. ಇದೊಂದು ಸೌಜನ್ಯದ ಭೇಟಿ ಅಷ್ಟೇ.
ಐಟಿ ,ಇಡಿ ದಾಳಿ ಯಾವ ಕಾರಣಕ್ಕೆ ಅಗಿದೆಯೋ ಗೊತ್ತಿಲ್ಲ. ಅವರು ಯಾವ ಕಾರಣಕ್ಕೆ ಆಗಿದೆ ಅಂತ ಹೇಳಲಿಲ್ಲ. ಸದ್ಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಕೊಟ್ರೆ ವಿಚಾರಣೆಗೆ ಹೋಗಬೇಕು ಅದು ಸ್ವಾಭಾವಿಕ. ಆದರೆ, ದೇಶದಲ್ಲಿ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಇವೆಲ್ಲವೂ ಕೂಡ ರಾಜಕೀಯ ಪ್ರೇರಿತ ದಾಳಿಗಳು. ಇದೇನು ಹೊಸತಲ್ಲ ಮುಂಚಿನಿಂದಲು ನಡೆಯುತ್ತಿದೆ. ಬಂಗಲೆ ವಿಚಾರದಲ್ಲಿ ಇಡಿ ದಾಳಿ ಆಗಿರಲಿಕ್ಕಿಲ್ಲ ಅನ್ನಿಸುತ್ತೆ. ಪಂಚನಾಮೆಯಲ್ಲಿ ಬಂಗಲೆ ವಿಚಾರದಲ್ಲಿ ದಾಳಿ ಆಗಿರುವ ಸಾಧ್ಯತೆ ಇಲ್ಲ" ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಕಾಂಗ್ರೆಸ್ ನಾಯಕರ ಹೆಸರನ್ನು ಬದಲಿಸುತ್ತಿರುವ ಕೇಂದ್ರ ಸರ್ಕಾರದ ನಡೆಯ ಬಗ್ಗೆಯೂ ಕಿಡಿಕಾರಿರುವ ಪರಮೇಶ್ವರ್, "ಹಿಂದೆ ಹಲವಾರು ಮಹನಿಯರು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅವರು ಹೆಸರುಗಳನ್ನು ಬಿಲ್ಡಿಂಗ್ ಗೆ , ರಸ್ತೆಗೆ, ಯೋಜನೆಗೆ ಇಟ್ಟಿದ್ದೇವೆ. ಅದನ್ನ ಬದಲಾವಣೆ ಮಾಡುವುದು ಸರಿ ಕಾಣುವುದಿಲ್ಲ. ಮುಂದೆ ಬರುವವರು ಇವರು ಇಡುವ ಹೆಸರನ್ನು ಬದಲಾವಣೆ ಮಾಡುತ್ತಾರೆ. ಗಾಂಧಿ , ನೆಹರು ಬಗ್ಗೆ ಮಾತಾಡುವುದು ಸರಿ ಕಾಣುವುದಿಲ್ಲ.
ನೆಹರು ಅವರು ಅಭಿವೃದ್ಧಿ ಪಥದಲ್ಲಿ ಅಡಿಪಾಯ ಹಾಕಿದ್ರು ಅದು ಎಲ್ಲರಿಗೂ ಗೊತ್ತಿದೆ. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟಿಲ್ಲ ಅಂತ ಹೇಳಲು ಹೊರಟ್ಟಿದ್ದಾರೆ. ಮೊನ್ನೆ ಒಂದು ವೀಡಿಯೋ ನೋಡಿದೆ ಅದರಲ್ಲಿ ಓರ್ವ ಸ್ವಾಮೀಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದು ಗಾಂಧಿ , ನೆಹರು ಅಲ್ಲ ಅಂತ ಹೇಳ್ತಾರೆ. ಇಂತವರಿಗೆ ಏನ್ ಹೇಳುವುದು?" ಎಂದು ಡಾ|ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ