ಅಮಿತ್​ ಶಾ ವಿರುದ್ಧ HDK ಆಕ್ರೋಶ

ಭಾನುವಾರ, 1 ಜನವರಿ 2023 (15:45 IST)
ಗುಜರಾತ್​​​ನ ಅಮುಲ್​ ಡೇರಿ ಮತ್ತು ಕರ್ನಾಟಕ ಹಾಲು ಮಹಾಮಂಡಳಿ KMF ವಿಲೀನ ಕುರಿತು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್​​​ ಶಾ ಮಾತನಾಡಿದ್ದರು. ಇದಕ್ಕೆ ಮಾಜಿ ಸಿಎಂ H.D ಕುಮಾರಸ್ವಾಮಿ ಆಕ್ಷೇಪವೆತ್ತಿದ್ದಾರೆ. ಈ ಕುರಿತು ಇಂದು ಸರಣಿ ಟ್ವೀಟ್​​ ಮಾಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ BJP ಸರ್ಕಾರ ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಕರ್ನಾಟಕ ರಾಜ್ಯವನ್ನು ಗುಜರಾತ್ ಮಾಡುವ ಧೂರ್ತ ಹುನ್ನಾರ ಇದು. ಅಷ್ಟೇ ಅಲ್ಲ, ಗುಜರಾತ್​​ಗೆ ಕರ್ನಾಟಕವೇ ಪ್ರತಿಸ್ಪರ್ಧಿ ಎನ್ನುವ ಕಾರಣಕ್ಕೆ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮುಗಿಸೇಬಿಡಬೇಕು ಎನ್ನುವ ದುರಾಲೋಚನೆ ಅಮಿತ್ ಶಾ ಅವರಿಗೆ ಸ್ಪಷ್ಟವಾಗಿ ಇದ್ದಂತಿದೆ. ಕನ್ನಡ ನೆಲದ ಮಣ್ಣಿನ ಮಕ್ಕಳ ಜೀವನಾಡಿ ಕರ್ನಾಟಕ ಹಾಲು ಮಹಾ ಮಂಡಳಿಯನ್ನು ಗುಜರಾತಿನ ಅಮುಲ್​​​ನಲ್ಲಿ ವಿಲೀನ ಮಾಡುವ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮಾಡಲು ಹೊರಟಿರುವ ಘೋರ ಅನ್ಯಾಯ ಎಂದು ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ