ಮದ್ಯ ಸೇವಿಸಲು ಹಣವಿಲ್ಲದ ಹೆಡ್ ಮಾಸ್ಟರ್ ಮಾಡಿದ್ದೇನ್ ಗೊತ್ತಾ..?
ಮಂಗಳವಾರ, 31 ಅಕ್ಟೋಬರ್ 2017 (14:44 IST)
ಮೈಸೂರು: ಸರ್ಕಾರಿ ಶಾಲೆ ಮುಖ್ಯ ಶಿಕ್ಷಕನೊಬ್ಬ ಮದ್ಯಕ್ಕಾಗಿ ಬಿಸಿಯೂಟದ ಅಕ್ಕಿ ಮಾರಲು ಯತ್ನಿಸಿರುವ ಘಟನೆ ಹೆಚ್.ಡಿಕೋಟೆ ತಾಲೂಕಿನ ರಾಜೇಗೌಡನಹುಂಡಿಯಲ್ಲಿ ನಡೆದಿದೆ.
ರಾಜೇಗೌಡನಹುಂಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ರಾಜಶೆಟ್ಟಿ ಎಂಬಾತನೇ ಅಕ್ಕಿ ಮಾರಲು ಯತ್ನಿಸಿ, ಸಿಕ್ಕಿಬಿದ್ದ ಮುಖ್ಯ ಶಿಕ್ಷಕ. ಶಾಲೆ ಸಮಯ ಮುಗಿದ ಬಳಿಕ ರಾಜಶೆಟ್ಟಿ ಶಾಲೆಗೆ ಭೇಟಿ ನೀಡಿದ್ದಾನೆ.
ಶಾಲೆಯಲ್ಲಿ ಅಕ್ಕಿಯಿದ್ದ ಕೊಠಡಿ ಬೀಗ ತೆಗೆದು ಸುಮಾರು 1 ಕ್ವಿಂಟಾಲ್ ಅಕ್ಕಿ ಮೂಟೆ ಮಾರಾಟ ಮಾಡಲು ಯತ್ನಿದ್ದಾನೆ. ಈ ವೇಳೆ ಗ್ರಾಮಸ್ಥರು ಅಕ್ಕಿ ಸಮೇತ ಮುಖ್ಯಶಿಕ್ಷಕನನ್ನು ಹಿಡಿದಿದ್ದಾರೆ.
ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಂತೆ ವಸರೆ ಬದಲಿಸಿದ ಮುಖ್ಯಶಿಕ್ಷಕ, ಅಕ್ಕಿ ಖಾಲಿಯಾಗಿದ್ದ ಸಂದರ್ಭದಲ್ಲಿ ಸಾಲ ಮಾಡಿದ್ದೆ. ಹೀಗಾಗಿ ಆ ಅಕ್ಕಿಯನ್ನು ಇದೀಗ ವಾಪಸ್ ನೀಡಲು ಮುಂದಾಗಿದ್ದೇನೆ ಎಂದು ರಾಜಶೆಟ್ಟಿ ಸಬೂಬು ಹೇಳಿದ್ದಾನೆ.
ಗ್ರಾಮಸ್ಥರು ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಿಇಒ ಸುಂದರ್, ಗ್ರಾಮಸ್ಥರ ಆರೋಪದ ಮೇಲೆ ಮುಖ್ಯಶಿಕ್ಷಕ ರಾಜಶೆಟ್ಟಿಗೆ ನೋಟಿಸ್ ನೀಡಿದ್ದಾರೆ. ಮುಖ್ಯಶಿಕ್ಷಕ ಮದ್ಯ ಸೇವನೆ ಬಗ್ಗೆ ಪೋಷಕರು ಬಿಇಒಗೆ ದೂರು ನೀಡಿದ್ದಾರೆ. ರಾಜಶೆಟ್ಟಿ ಮೇಲೆ ಇಲಾಖಾ ತನಿಖೆಗೂ ಬಿಇಒ ಆದೇಶಿಸಿದ್ದಾರೆ.