ಆನೇಕಲ್ : ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯಿರುವ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ.
ಪ್ರತಿಯೊಬ್ಬ ಮಕ್ಕಳಲ್ಲೂ ಯೋಗದ ಅರಿವು ಮೂಡಿಸುವ ಕೆಲಸ ಮಾಡಬೇಕು. ಭಾರತವನ್ನು ಭವ್ಯ ಭಾರತವನ್ನಾಗಿ ಮಾಡುವ ಕನಸು ನನಸಾಗಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮನಸ್ಸಿನ ಏಕಾಗ್ರತೆಗೆ ಯೋಗ ಮತ್ತು ಧ್ಯಾನ ಪೂರಕವಾಗಿವೆ. ಯೋಗದಿಂದ ಮನಸ್ಸಿನ ಸಮಚಿತ್ತತೆಯನ್ನು ಪಡೆಯುವವರು ಸೃಷ್ಟಿಯ ಭಾಗವಾಗಿ ಮೋಕ್ಷವನ್ನು ಪಡೆಯುತ್ತಾರೆ.
ಈಗ ಮನುಷ್ಯ ಸಂಪತ್ತು ಹಾಗೂ ಹಣ ಗಳಿಕೆಯನ್ನು ಗುರಿಯಾಗಿಸಿಕೊಂಡಿದ್ದಾನೆ. ಈ ರೀತಿಯ ಚಿಂತನೆ ಬದಲಾಗಿ ಮಾನವನ ಒಳಿತನ್ನು ಗುರಿಯಾಗಿಸಿಕೊಂಡರೆ, ವಿಶ್ವವೇ ಒಂದು ಸುಂದರ ತಾಣವಾಗುತ್ತದೆ ಎಂದರು.
ಮನುಷ್ಯನಿಗೆ ಯೋಚನಾಶಕ್ತಿ ಅಭೂತಪೂರ್ವವಾಗಿದೆ. ಮನುಕುಲಕ್ಕೆ ಒಗ್ಗಿಕೊಳ್ಳುವಿಕೆಯ ಗುಣವಿದೆ. ಮನುಷ್ಯನೊಳಗೆ ಎಲ್ಲ ಸಮಸ್ಯೆಗಳಿಗೆ ಉತ್ತರವಿದೆ. ನಮ್ಮ ದೇಹದೊಳಗಿನ ಎಲ್ಲ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ.
ಯೋಗದಿಂದ ಜೀವನದಲ್ಲಿ ಪರಿಪೂರ್ಣತೆ ಸಾಧಿಸುವ ಮುಗ್ಧತೆಯನ್ನು ಕಾಯ್ದುಕೊಳ್ಳಬಹುದು. ದೇವರು ನೀಡಿದ್ದನ್ನು ಯೋಗದಿಂದ ನಿರಂತರವಾಗಿ ಕಾಪಾಡಿಕೊಳ್ಳಬಹುದು ಎಂದು ವಿವರಿಸಿದರು.