ಬೆಂಗಳೂರು: ರಾಜ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಎಐಸಿಸಿ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ.
ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ನಿರ್ಧರಿಸಿದಾಗ ತಿಳಿಸುತ್ತೇವೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುವ ಮೂಲಕ ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ ಮಾಡುತ್ತಿರುವುವರಿಗೆ ಆಘಾತ ನೀಡಿದ್ದಾರೆ.
ಕಲಬುರಗಿಯಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ನವದೆಹಲಿಯಲ್ಲಿ ತಮ್ಮನ್ನು ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಕರ್ನಾಟಕದಲ್ಲಿನ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಪಪಡಿಸಿದರು.
ಕಾಂಗ್ರೆಸ್ ಶಾಸಕರ ಮನೆ ಮೇಲೆ ಇಡಿ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸದ ಅವರು, ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಂಸದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ದಾಳಿ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಒಡೆಯುವುದು ಎನ್ಡಿಎಯ ಪ್ರಮುಖ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರುವುದರಿಂದ ಅದು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.