ದೊಣ್ಣೆಯಿಂದ ಹೊಡೆದು ಪತ್ನಿ ಬರ್ಬರ ಹತ್ಯೆ
ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಮನಗರ ತಾಲ್ಲೂಕಿನ ಅಮ್ಮನಪುರ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಬೋರಯ್ಯ ಎಂಬ ವ್ಯಕ್ತಿಯು ತಡರಾತ್ರಿ ಕುಡಿದ ಮತ್ತಿನಲ್ಲಿ ತನ್ನ ಪತ್ನಿ ಭದ್ರಮ್ಮನನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ 2014ರಲ್ಲಿ ತನ್ನ ಮೊದಲ ಪತ್ನಿ ಬಸಮ್ಮನನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದ. ನಂತರ ಜಾಮೀನಿನ ಮೇಲೆ ಹೊರಬಂದು ಭದ್ರಮ್ಮನನ್ನು ವಿವಾಹವಾಗಿದ್ದ. ಆದರೆ ತಡರಾತ್ರಿ ಕುಡಿದ ಮತ್ತಿನಲ್ಲಿ ತನ್ನ ಎರಡನೇ ಪತ್ನಿಯನ್ನು ಕೊಲೆ ಮಾಡಿ ತನ್ನ ಕ್ರೌರ್ಯವನ್ನು ಮೆರೆದಿದ್ದಾನೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬೋರಯ್ಯನನ್ನು ವಶಕ್ಕೆ ಪಡೆಯಲಾಗಿದೆ.