ರುದ್ರೇಶ್ ಹತ್ಯೆಯಲ್ಲಿ ಶೋಭಾ ಕರಂದ್ಲಾಜೆ ಕೈವಾಡವಿದೆ ಎಂದು ಹೇಳೋಕಾಗುತ್ತಾ?: ಸಿಎಂ ಸಿದ್ದರಾಮಯ್ಯ

ಸೋಮವಾರ, 7 ನವೆಂಬರ್ 2016 (12:48 IST)
ರುದ್ರೇಶ್ ಹತ್ಯೆಯ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ ಕೈವಾಡವಿದೆ ಎಂದು ಹೇಳೋಕಾಗುತ್ತಾ ಎಂದ ಅವರು, ಶೋಭಾ ಅವರದ್ದು ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 
 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳುಗೆಡುವಲು ರುದ್ರೇಶ್ ಪ್ರಕರಣದಲ್ಲಿ ಅನಗತ್ಯವಾಗಿ ಸಚಿವ ರೋಷನ್ ಬೇಗ್ ವಿರುದ್ಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಲಾಭವಾಗುವುದಿಲ್ಲ ಎಂದು ತಿರುಗೇಟು ನೀಡಿದರು.
 
ರಾಜ್ಯ ಸರಕಾರ ಅಭಿವೃದ್ಧಿಪರ ಜನಪರ ಕಾರ್ಯಗಳನ್ನು ಮಾಡುತ್ತಿರುವುದನ್ನು ಸಹಿಸದೆ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಬಿಜೆಪಿ ನಾಯಕರು ಸದಾ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಹಿಂದೆ ಸಿಬಿಐಯನ್ನು ಚೋರಾ ಬಚಾವ್ ಸಂಸ್ಥೆ ಎನ್ನುತ್ತಿದ್ದ ಬಿಜೆಪಿ ನಾಯಕರು ಇದೀಗ ಪ್ರತಿಯೊಂದು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಡ ಹೇರುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.
 
ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯ ಆರೋಪವನ್ನು ಸರಕಾರದ ಮೇಲೆ ಹೊರಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ