ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: ಜೀವ ಕಾಪಾಡಿದ ಡ್ಯೂಟಿ ಡಾಕ್ಟರ್
ಸುಟ್ಟ ಗಾಯಗಳ ವಿಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಫ್ರಿಡ್ಜ್, ರಿಜಿಸ್ಟರ್ ಬುಕ್ ಸೇರಿದಂತೆ ಆಸ್ಪತ್ರೆಯ ಪರಿಕರಗಳಿಗೆ ಹಾನಿಯಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಡಾ. ದಿವ್ಯ ಸಮಯ ಪ್ರಜ್ಞೆಯಿಂದ ರೋಗಿಗಳ ಜೀವ ಉಳಿದಿದೆ. 26 ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ.
ವಾರ್ಡ್ ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 26 ಮಂದಿಯನ್ನು ತಕ್ಷಣವೇ ಶಿಫ್ಟ್ ಮಾಡಲಾಗಿದೆ. ಮುಂಜಾನೆ ಸುಮಾರು 3.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಶಬ್ಧ ಕೇಳಿ ಕರ್ತವ್ಯದಲ್ಲಿದ್ದ ವೈದ್ಯೆ ದಿವ್ಯ ಸಿಬ್ಬಂದಿಗಳನ್ನು ಎಚ್ಚರಿಸಿದ್ದಾರೆ. ಮೇಲಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.
ಕೂಡಲೇ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲವು ಕ್ಷಣ ರೋಗಿಗಳೂ ಆತಂಕ ಎದುರಿಸಿದ್ದು ನಿಜ. ದುರಂತಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ.