ಕಲಬುರಗಿ : ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಅವರು 3 ವರ್ಷ ಶಿಕ್ಷೆ ಮತ್ತು 45 ಸಾವಿರ ರು. ದಂಡ ವಿಧಿಸಿದ್ದಾರೆ.
2020ರಲ್ಲಿ ರಾತ್ರಿ ಮಹಿಳೆಯೊಬ್ಬರು ತನ್ನ 4 ವರ್ಷದ ಮಗಳನ್ನು ಕರೆದುಕೊಂಡು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಲಗಿದ್ದರು. ಬೆಳಗಿನ ಜಾವ ಪ್ರವೀಣ್ ಹಿರೇಮಠ ಎಂಬಾತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ.
ಬಾಲಕಿ ಅಳುವ ಶಬ್ಧ ಕೇಳಿ ತಾಯಿ ಮಗುವನ್ನು ರಕ್ಷಿಸಿ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು. ಈ ದೂರಿನ ಅನ್ವಯ ಸಿಪಿಐ ಕಪೀಲದೇವ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. ಬ್ರಹ್ಮಪುರ ಪೊಲೀಸ್ ಮುಖ್ಯಪೇದೆ ಸಂತೋಷಕುಮಾರ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಅವರು ಅಪರಾಧಿಗೆ 3 ವರ್ಷ ಶಿಕ್ಷೆ ಹಾಗೂ 45 ಸಾವಿರ ರು. ದಂಡ ವಿಧಿಸಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 1 ಲಕ್ಷ ಪರಿಹಾರ ಹಾಗೂ ದಂಡದ ಹಣದಲ್ಲಿ 40 ಸಾವಿರ ಬಾಲಕಿಗೆ ಕೊಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.