`ಕನ್ನಡಿಗರು ಸೋಮಾರಿಗಳು' ಎಂದು ಜರಿದ ಎಚ್ಆರ್ ಮ್ಯಾನೇಜರ್ ಅರೆಸ್ಟ್

ಶನಿವಾರ, 24 ಜೂನ್ 2017 (14:54 IST)
ಮೆಟ್ರೋದಲ್ಲಿ ಕನ್ನಡ ಹೇರಿಕೆ, ಕೆ.ಎಂ. ದೊಡ್ಡಿ ಬ್ಯಾಂಕ್`ನಲ್ಲಿ ಕನ್ನಡ ಮಾತನಾಡಲು ನಿರಾಕರಿಸಿದ ನೌಕರ ಸೇರಿದಂತೆ ಕನ್ನಡದ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಸಂಸ್ಥೆ ಎಚ್ಆರ್ ಮ್ಯಾನೇಜರ್ ಕನ್ನಡ ಭಾಷೆಗೆ ಅವಹೇಳನ ಮಾಡಿ ಬಂಧನಕ್ಕೀಡಾಗಿದ್ದಾನೆ.

ಫುಡ್ ಡೆಲಿವರಿ ಬಾಯ್ ತಡವಾಗಿ ಬಂದನೆಂಬ ಕಾರಣಕ್ಕೆ ಆತನ ಜೊತೆ ಕನ್ನಡ ಭಾಷೆಯನ್ನೂ ನಿಂದಿಸಿರುವ ಬಗ್ಗೆ ವರದಿಯಾಗಿದೆ. ಆನ್`ಲೈನ್ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿಯ ಉದ್ಯೋಗಿ ಅನಿಲ್ ಎಂಬಾತ ಮೇಲೆ ಸಾಥ್ವಿಕ್ ಎಂಬಾತ ದೌರ್ಜನ್ಯ ಎಸಗಿದ್ದಾನೆಂದು ಹೇಳಲಾಗಿದೆ.
 
ಜೂನ್ 21ರಂದು ಸಾಥ್ವಿಕ್ ಫುಡ್ ಆರ್ಡರ್ ಮಾಡಿದ್ದರಂತೆ, ಒಂದೆರಡು ನಿಮಿಷ ಡೆಲಿವರಿ ಲೇಟಾಗಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ರೇಗಾಡಿದ್ದ ಸಾಥ್ವಿಕ್, ಕನ್ನಡಿಗರು ಸೋಮಾರಿ ಜನ ಎಂದು ಟೀಕಿಸಿದ್ದಾನೆಂದು ಆರೋಪಿಸಲಾಗಿದೆ.

7 ನಿಮಿಷದಲ್ಲೇ ನಾನು ಡೆಲಿವರಿ ಮಾಡಿದ್ಧೆನೆ. ಮಳೆ ಇದ್ದುದರಿಂದ 2 ನಿಮಿಷ ತಡವಾಗಿದೆ. ಬಾಸ್ಟರ್ಡ್ ಎಂದು ಕರೆದ ಆತ, ನಾನು ಏನೇ ಹೇಳಿದರೂ ಕೇಳಲಿಲ್ಲ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಡೋಂಟ್ ಯೂಸ್ ದಟ್ ಡರ್ಟಿ ಲಾಂಗ್ವೇಂಜ್, ಕನ್ನಡಿಗರು ಸೋಮಾರಿಗಳು ಎಂದು ಅವಹೇಳನ ಮಾಡಿದ. ಅವನು ಕನ್ನಡಕ್ಕೆ ಅಪಮಾನ ಮಾಡಿದ್ದನ್ನ ಸಹಿಸಲು ಆಗಲಿಲ್ಲ. ಹೀಗಾಗಿ, ಪೊಲೀಸರಿಗೆ ದೂರು ನೀಡಿದ್ದಾಗಿ’ ಸುದ್ದಿವಾಹಿನಿಯೊಂದಕ್ಕೆ ಅನಿಲ್ ಹೇಳಿದ್ದಾರೆ. ಅನಿಲ್ ಸಹಕಾರಕ್ಕೆ ಬಂದ ವಾಟಾಳ್ ನಾಗರಾಜ್ ದೂರು ನೀಡಲು ಸಹಕರಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಅಪಮಾನ, ಶಾಂತಿ ಕದಡುವ ಯತ್ನ ಆರೋಪ, ಶತೃತ್ವ ಸೃಷ್ಟಿ ಆರೋಪದ ಹಿನ್ನೆಲೆಯಲ್ಲಿ ಸೆಕ್ಷನ್ 504ರ ಮತ್ತು ಸೆಕ್ಷನ್ 153(ಎ) ಅಡಿ ಬಂಧಿಸಲಾಗಿದೆ.

ಕೃಪೆ: ನ್ಯೂಸ್ 18
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ