ಮಂಗಳೂರು: ಧರ್ಮಸ್ಥಳ ಹಲವು ಸ್ಥಳಗಳಲ್ಲಿ ಶವ ಹೂತಿಟ್ಟ ಪ್ರಕರಣ ಸಂಬಂಧ ನಿನ್ನೆ ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಇಂದು ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯ ಮಂಗಳವಾರ ಬಿಗು ಪೊಲೀಸ್ ಭದ್ರತೆಯೊಂದಿಗೆ ಆರಂಭವಾಯಿತು.
ಧರ್ಮಸ್ಥಳದ ಸ್ನಾನ ಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗವನ್ನು ಏಳೆಂಟು ಕಾರ್ಮಿಕರು ಜೋರು ಮಳೆಯ ನಡುವೆಯೇ ಬಿಕ್ಕಾಸು, ಹಾರೆಯಿಂದ ಮಣ್ಣು ಹೊರತೆಗೆಯುತ್ತಿದ್ದಾರೆ.
ಈ ಪ್ರಕರಣದ (ಸಂಖ್ಯೆ 39/2025) ಸಾಕ್ಷಿ ದೂರುದಾರ ವ್ಯಕ್ತಿಯೂ ಮುಸುಕು ಧರಿಸಿ ಸ್ಥಳದಲ್ಲಿ ಹಾಜರಿದ್ದರು.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಬೆಳ್ತಂಗಡಿ ತಾಲ್ಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಸ್ಐಟಿಯ ಅಧಿಕಾರಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿದ್ದು ಮಾರ್ಗದರ್ಶನ ಮಢುತ್ತಿದ್ದಾರೆ. ವಿಧಿವಿಜ್ಞಾನ ತಂಡದ ಅಧಿಕಾರಿಗಳೂ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗಕ್ಕೆ ತೆರಳಿದ್ದಾರೆ. ಸಾಕ್ಷಿ ದೂರುದಾರನ ಜೊತೆಗೆ ವಕೀಲರ ತಂಡವೂ ಸ್ಥಳಕ್ಕೆ ಬಂದಿದೆ.
ಜಾಗವನ್ನು ಅಗೆಯುವ ಕಾರ್ಯ ಆರಂಭಿಸುವ ಮುನ್ನ ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ಡಿಐಜಿ ಎಂ.ಎನ್.ಅನುಚೇತ್ ನೇತೃತ್ವದಲ್ಲಿ ಸಭೆ ನಡೆಸಿದ ಅಧಿಕಾರಿಗಳು ಮುಂದಿನ ತನಿಖೆ ಬಗ್ಗೆ ಸಮಾಲೋಚನೆ ನಡೆಸಿದರು.