ನೇಹಾ ಹತ್ಯೆ ಲವ್ ಜಿಹಾದ್ ಅಲ್ಲ, ವೈಯಕ್ತಿಕ ಕಾರಣ ಎಂದ ಸಿಎಂ ಸಿದ್ದರಾಮಯ್ಯ

Krishnaveni K

ಶುಕ್ರವಾರ, 19 ಏಪ್ರಿಲ್ 2024 (13:12 IST)
Photo Courtesy: Twitter
ಬೆಂಗಳೂರು: ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಇದು ಲವ್ ಜಿಹಾದ್ ಅಲ್ಲ, ವೈಯಕ್ತಿಕ ಕಾರಣಕ್ಕೆ ನಡೆದ ಕೊಲೆ ಎಂದಿದ್ದಾರೆ.

ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರು ತಲೆಗೊಂದು ಮಾತನಾಡುತ್ತಿದ್ದಾರೆ. ಆರೋಪಿ ಫಯಾಜ್ ಮತ್ತು ನೇಹಾ ಪ್ರೀತಿಸುತ್ತಿದ್ದರು ಎಂದು ಆಡಳಿತ ಪಕ್ಷದ ನಾಯಕರು ಹೇಳಿದರೆ, ವಿಪಕ್ಷಗಳು ಇದು ಲವ್ ಜಿಹಾದ್ ಎನ್ನುತ್ತಿದ್ದಾರೆ. ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹಸಚಿವರು, ಪೊಲೀಸ್ ಕಮಿಷನರ್ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ. ಇನ್ನೊಂದೆಡೆ, ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಎಸ್ ಈಶ್ವರಪ್ಪ, ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಆಗಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಇಂತಹ ಮುಸ್ಲಿಂ ಗೂಂಡಾಗಳನ್ನು ಹೊಡೆದು ಹಾಕಿ ಎಂದು ಆಗ್ರಹಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಕೊಲೆಯಾಗಿರುವುದು ವೈಯಕ್ತಿಕ ಕಾರಣಕ್ಕೆ ಆಗಿರುವಂತದ್ದು. ಕಾನೂನು ಸುವ್ಯವಸ್ಥೆ ಕರ್ನಾಟಕದಲ್ಲಿ ಚೆನ್ನಾಗಿದೆ. ಇದು ಲವ್ ಜಿಹಾದ್ ಅಲ್ಲ ಎಂದು ಹೇಳಿದ್ದಾರೆ. ಇನ್ನು, ಡಿಸಿಎಂ ಡಿಕೆ ಶಿವಕುಮಾರ್ ಕೂಡಾ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ನಾವು ಇಂತಹ ಕ್ರಿಮಿನಲ್ ಗಳನ್ನು ಖಡಾಖಂಡಿತವಾಗಿ ಸೆರೆಹಿಡಿಯುತ್ತೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಇನ್ನು, ಗೃಹಸಚಿವ ಪರಮೇಶ್ವರ್ ಹೇಳಿಕೆ ಇನ್ನೊಂದು ರೀತಿಯಿದೆ. ‘ನನಗೆ ಬಂದ ಮಾಹಿತಿ ಪ್ರಕಾರ ಹುಡುಗಿ ಮತ್ತು ಹುಡುಗ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯಾವಾಗ ಹುಡುಗಿ ಮದುವೆಯಾಗಲು ಒಪ್ಪಲಿಲ್ಲವೋ ಆಗ ಹುಡುಗ ಬಂದು ಚೂರಿ ಹಾಕಿದ್ದಾನೆ’ ಎಂದಿದ್ದಾರೆ.

ಇನ್ನು, ಸಿಎಂ, ಗೃಹಸಚಿವರ ಹೇಳಿಕೆಗಳಿಗೆ ಯುವತಿ ನೇಹಾ ತಂದೆ, ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹೀರೇಮಠ್ ವೈಯಕ್ತಿಕ ಸಂಬಂಧ ಅಂದರೆ ಏನು ಅದರ ಅರ್ಥ? ಆಕೆಗೂ ಆತನಿಗೂ ವ್ಯವಹಾರ ಇದ್ದಿದ್ದರೆ ಕೊಲೆ ಯಾಕೆ ಆಗ್ತಿದ್ದಳು? ಮಾನ್ಯ ಮುಖ್ಯಮಂತ್ರಿಗಳೇ, ಗೃಹಸಚಿವರೇ ಸರಿಯಾಗಿ ಮಾಹಿತಿ ತಿಳಿದುಕೊಂಡು ಮಾತನಾಡಿ. ನನ್ನ ಮನೆತನದ ಮರ್ಯಾದೆ ಹೆಸರು ಹಾಳು ಮಾಡಬೇಡಿ. ಸರಿಯಾಗಿ ಮಾಹಿತಿ ತಿಳಿದುಕೊಂಡು ಮಾತನಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಜೋರಾಗಿದೆ. ಸಾರ್ವಜನಿಕರು ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ