ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ರಾಜ್ಯದ ಹಲವೆಡೆ ಎನ್‌ಐಎ ದಾಳಿ

Sampriya

ಬುಧವಾರ, 27 ಮಾರ್ಚ್ 2024 (15:43 IST)
Photo Courtesy X
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರು, ಶಿವಮೊಗ್ಗ ಹುಬ್ಬಳಿಯಲ್ಲಿ ಏಕಕಾಲಕ್ಕೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಧಿಕಾರಿಗಳು ಐದು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿ ಸೇರಿದಂತೆ 5 ಕಡೆ ದಾಳಿ ಮಾಡಲಾಗಿದೆ. ಅಬ್ದುಲ್ ಮತೀನ್, ಬಾಂಬರ್ ಮುಸಾವೀರ್ ಹುಸೇನ್, ಬಾಂಬರ್‌ಗೆ ಸಹಾಯ ಮಾಡಿದ ಸರ್ದಾರ್ ನವೀದ್ ಸೇರಿದಂತೆ ಅನೇಕರ ಮನೆ ಮೇಲೆ ದಾಳಿ ಪರಿಶೀಲನೆ ನಡೆಸಿದ್ದಾರೆ.

ಬಾಂಬರ್ ಮುಸಾವೀರ್ ಹುಸೇನ್ ಚೆನ್ನೈನಿಂದ ಬಂದಾಗ, ಮತೀನ್‌, ನವೀದ್‌ ಸಹಾಯ ಮಾಡಿದ್ದರು ಎಂದು ಹೇಳಲಾಗಿದೆ. ಸದ್ಯ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕುತ್ತಿದ್ದಾರೆ.

ಚೆನ್ನೈನ ಮೂರು ಕಡೆ ಕೂಡ ಎನ್​ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಶಂಕಿತರ ಶೋಧ ನಡೆಸಿದೆ. ಉಗ್ರರಿಗೆ ಹಣದ ನೆರವು, ಉಗ್ರರ ಪರ ಹಣ ಸಂಗ್ರಹ ಆರೋಪದ ಮೇಲೆ ಶಂಕಿತರ ಮನೆಗಳಲ್ಲಿ ಶೋಧ ನಡೆಸಿದೆ. ತಮಿಳುನಾಡಿನಲ್ಲಿ ನಡೆದಿರುವ ಎನ್‌ಐಎ ದಾಳಿ ಕೂಡ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ್ದೇ ಆಗಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ