2020 ರ ಫೆಬ್ರವರಿ 3ನೇ ವಾರದಲ್ಲಿ ಆಯೋಜಿಸಲು ಉದ್ದೇಶಿಸಿರುವ ಬೃಹತ್ ಉದ್ಯೋಗ ಮೇಳದ ಸಿದ್ಧತೆ ಭರದಿಂದ ನಡೆದಿವೆ.
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ 2020 ರ ಫೆ.3ನೇ ವಾರದಲ್ಲಿ ಆಯೋಜಿಸಲು ಉದ್ದೇಶಿಸಿರುವ ಬೃಹತ್ ಉದ್ಯೋಗ ಮೇಳದ ಸ್ಥಳ ಪರಿಶೀಲನೆಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ನೇತೃತ್ವದ ಸಮಿತಿಯು ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯ ಹಾಗೂ ಜೆಎಸ್‌ಎಸ್ ಮಹಾವಿದ್ಯಾಲಯಗಳಿಗೆ ಭೇಟಿ ನೀಡಿತು.
2019-20 ನೇ ಸಾಲಿನಲ್ಲಿ ಧಾರವಾಡ, ಗದಗ ಮತ್ತು ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳಿಗೆ ಅವರು ಹೊಂದಿರುವ ವಿದ್ಯಾರ್ಹತೆಗೆ ಅನುಗುಣವಾಗಿ ಉತ್ತಮ ಉದ್ಯೋಗಾವಕಾಶ ದೊರಕಿಸಲು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತ ಕಂಪನಿಗಳು ಒಂದೇ ವೇದಿಕೆಯಲ್ಲಿ ತರುವುದು ಮೇಳದ ಉದ್ದೇಶವಾಗಿದೆ. ಮೇಳದ ಆಯೋಜನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕುರಿತು ಸಮಿತಿಯು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಿದೆ.
ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ. ಬಿ.ಎಫ್. ಚಾಕಲಬ್ಬಿ, ಜೆಎಸ್‌ಎಸ್ ಕಾಲೇಜು ಆಡಳಿತಾಧಿಕಾರಿ ಅಜಿತ್ ಪ್ರಸಾದ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಚಂದ್ರಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಶಿವಪುತ್ರಪ್ಪ, ಕೆಸಿಡಿಯ ಪ್ರವಾಸೋದ್ಯಮ ವಿಭಾಗದ ಜಗದೀಶ ಕಿವುಡನವರ ಇದ್ದರು.