ಬೆಂಗಳೂರು: ಬರೋಬ್ಬರಿ 81ದಿನಗಳ ಅನಾರೋಗ್ಯದ ದಿನಗಳನ್ನು ಕಳೆದು,ನಾನು ಮನೆಗೆ ಬಂದಾಗ ನನ್ನಮ್ಮನ ಮುಖದ ಮೇಲೆ ಉಕ್ಕಿ ಬಂದ ಭಾವನೆ ಕಂಡು ಕಣ್ಣೀರು ಬಂತು. ಇದು ನನ್ನ ಪುನರ್ ಜನ್ಮ ಎಂದು ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಅವರು ಆಡಿದ್ದಾರೆ.
ಹೌದು...ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬರೋಬ್ಬರಿ 81 ದಿನಗಳ ಅನಾರೋಗ್ಯದ ದಿನಗಳನ್ನು ಕಳೆದು, ಕುಟುಂಬ ಎಲ್ಲವನ್ನು ಬಿಟ್ಟು, ಕಹಿ ದಿನಗಳ ಜೊತೆಗೆ ಹೋರಾಡಿ ಮನೆಗೆ ವಾಪಾಸ್ ಮರಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಾಕಿದ್ದಾರೆ.
ಪೋಸ್ಟ್‌ನಲ್ಲಿ ಹೀಗಿದೆ:
ನಿಮ್ಮ ಸುರೇಶ್ ಕುಮಾರ್ ಮಾಡುವ ನಮಸ್ಕಾರಗಳು. 81 ದಿನಗಳ ನಂತರ ನಾನು ನಮ್ಮ ಮನೆಗೆ ವಾಪಸ್ಸು ಬಂದಿದ್ದೇನೆ.ನಾನು ಮನೆಗೆ ಬಂದಾಗ ನನ್ನಮ್ಮನ ಮುಖದ ಮೇಲೆ ಉಕ್ಕಿ ಬಂದ ಭಾವನೆ ಕಂಡು ಕಣ್ಣೀರು ಬಂತು. ತುರ್ತು ಪರಿಸ್ಥಿತಿಯಲ್ಲಿ ಕಳೆದ 15 ತಿಂಗಳ ಸೆರೆಮನೆ ವಾಸದ ಅವಧಿ ಬಿಟ್ಟರೆ ಇದೇ ನಾನು ನನ್ನ ಮನೆ ಬಿಟ್ಟು ಇಷ್ಟು ದೀರ್ಘಕಾಲ ಇದ್ದದ್ದು. ಈ 81 ದಿನ ನಾನು ಅನುಭವಿಸಿದ ಚಿಕನ್ ಗುನ್ಯಾ ಗಂಭೀರ ಸಮಸ್ಯೆ, ನೋವು, ಸಂಕಟ, ವೇದನೆ, ಆತಂಕ...
ವೈದ್ಯರು ನೀಡಿದ ಅತ್ಯುತ್ತಮ ಚಿಕಿತ್ಸೆ, ನನ್ನನ್ನು ಜತನವಾಗಿ ನೋಡಿಕೊಂಡ ನನ್ನ ಕುಟುಂಬ, ಎಂತೆಂಥ ಪರಿಸ್ಥಿತಿಯಲ್ಲಿಯೂ ನನ್ನ ಜೊತೆಗೆ ನಿಂತ ನನ್ನ ಹತ್ತಿರದ ಮಿತ್ರರ ತಂಡ , ನನ್ನ ಆರೋಗ್ಯ ಸುಧಾರಣೆಗಾಗಿ ಹಾರೈಸಿದ, ವಿವಿಧ ದೇವಸ್ಥಾನಗಳಲ್ಲಿ ನನ್ನ ಹೆಸರಿನಲ್ಲಿ ಪೂಜೆ ಸಲ್ಲಿಸಿರುವ ಅಸಂಖ್ಯಾತ ಕಾರ್ಯಕರ್ತರು - ಹಿತೈಷಿಗಳು... ಈ ಎಲ್ಲವೂ ನನಗೆ ಪುನರ್ಜನ್ಮ ನೀಡಿದೆ. ಇದು ನಿಜಕ್ಕೂ ನನಗೆ ಒಂದು ಹೊಸ ಹುಟ್ಟು. ಇನ್ನೂ ಕೆಲವು ದಿನಗಳು ನಾನು ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ವೈದ್ಯರು ಸೂಚನೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ನನ್ನ ಸಹಜ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸುತ್ತೇನೆ.
ನಾಗರಿಕರನ್ನು ಭೇಟಿ ಮಾಡುವುದು, ಅಧಿಕಾರಿಗಳ ಸಭೆ ನಡೆಸುವುದು, ನಾಗರಿಕರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವುದು... ಈ ಸಂಗತಿಗಳನ್ನು ಮಾಡಲು ಒಂದು ಸಮಯ ಸೂಚಿ ಸಿದ್ಧಪಡಿಸುತ್ತಿದ್ದೇನೆ. ಎಲ್ಲರ ಹಾರೈಕೆ, ಆಶೀರ್ವಾದ, ಸಹಕಾರ ನನ್ನ ಮೇಲೆ ಹೀಗೆ ಇರಲಿ. ನವಂಬರ್ ಇಪ್ಪತ್ತರ ನಂತರ ಪ್ರಾರಂಭವಾಗುವ ಈ ಭೇಟಿಗೆ ತಾವೆಲ್ಲರೂ ಸಹಕರಿಸಬೇಕೆಂದು ಕೋರುತ್ತೇನೆ.