ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಪೆನ್‌ಡ್ರೈವ್ ಹೊರಗಿಟ್ಟಿದ್ದು ದೇವರಾಜೇಗೌಡ ಮತ್ತು ಕಾರ್ತಿಕ್. ಹೀಗಾಗಿ ಈ ಇಬ್ಬರನ್ನೂ ವಿಚಾರಣೆ ನಡೆಸಬೇಕು. ಈ ಪ್ರಕರಣಕ್ಕೂ ಡಿ.ಕೆ. ಶಿವಕುಮಾರ್ ಅವರಿಗಾಗಲಿ ಮತ್ತು ನನಗಾಗಲಿ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಪಷ್ಟಪಡಿಸಿದರು.
ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಯಾವುದೋ ವಿಚಾರದಲ್ಲಿ ನನ್ನ ಹೆಸರು ಹೇಳಿದ್ದಾರೆ. ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಪ್ರಕರಣದ ತನಿಖೆ ಬೇರೆ ಬೇರೆ ದಿಕ್ಕು ಪಡೆಯುತ್ತಿದೆ. ಪ್ರಕರಣ ಎಲ್ಲೆಲ್ಲೋ ಹೋಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇವರಾಜೇಗೌಡ ಅವರನ್ನು ತಮ್ಮ ಬಳಿ ಕರೆದುಕೊಂಡು ಬನ್ನಿ ಎಂದು ಹೇಳಿರಲಿಲ್ಲ ಎಂದು ಅವರು ಹೇಳಿದರು.
ನಾಲ್ಕು ಮಂತ್ರಿಗಳ ಕಮಿಟಿ ಮಾಡಿ, ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ಮೋದಿ, ಬಿಜೆಪಿ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ನನಗೆ ಶಿವರಾಮೇಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜೊತೆಗೆ ಮಾತನಾಡಿಲ್ಲ ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದರು.
ದೇವರಾಜೇಗೌಡ ಆರೋಪಕ್ಕೆ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ, ದೇವರಾಜೇಗೌಡ ಜೊತೆ ವ್ಯವಹರಿಸುವಾಗ ಎಚ್ಚರ. ಆತ ನಾಲಾಯಕ್ ವ್ಯಕ್ತಿ, ಒಬ್ಬ ಫ್ರಾಡ್. ಪೆನ್‌ಡ್ರೈವ್ ವ್ಯಾಪಾರಕ್ಕಿಟ್ಟವನೇ ಈ ದೇವರಾಜೇಗೌಡ. ನನಗೂ ಈ ದೇವರಾಜೇಗೌಡಗೂ ಸಂಬಂಧ ಇಲ್ಲ. ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ತನಿಖೆಯಾಗಲಿ ಎಂದರು.
ದೇವರಾಜೇಗೌಡ ನನಗೆ ಫೋನ್ ಮಾಡಿ, ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಹೇಳಿದ್ದ. ನಾನು ಆಗಲಿ ಎಂದು ಫೋನ್ನಲ್ಲಿ ಹೇಳಿದ್ದೆ. ಈ ಮಾತನ್ನೇ ಇಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡಿದ್ದಾನೆ. ದೇವರಾಜೇಗೌಡ ಏ.29ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ಬೌರಿಂಗ್ ಕ್ಲಬ್ನಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಎಂದು ತಿಳಿಸಿದರು.
ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಮುಂದೆ ಯಾವ ಪಕ್ಷಕ್ಕೆ ಸೇರುತ್ತೇನೆ ಅಂತ ಹೇಳುತ್ತೇನೆ. ಅಧಿಕಾರ ಕೊಡುತ್ತಾರೆ ಅಂತ ಜೆಡಿಎಸ್ಗೆ ಸೇರಿದೆ. ಆಮೇಲೆ ರುಬ್ಬಿ ಹೊರಗಡೆಯೂ ಕಳುಹಿಸಿದ್ದಾರೆ. 25 ವರ್ಷ ಆಯ್ತು ಶಾಸಕ ಗಿರಿ ಹೋಗಿ. ನಾನು ಮೂಲತಃ ಕಾಂಗ್ರೆಸ್ ವ್ಯಕ್ತಿ. ಯೂಥ್ ಕಾಂಗ್ರೆಸ್ನಲ್ಲೂ ಇದ್ದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಸದ್ಯದಲ್ಲೇ ನನ್ನ ನಿರ್ಣಯ ತಿಳಿಸುತ್ತೇನೆ ಎಂದು ತಿಳಿಸಿದರು.