ಕೆಲವು ಮಕ್ಕಳು ರಾಂಕ್ ಬರುತ್ತಾರೆ, ಮತ್ತೆ ಕೆಲವರು ಪಾಸ್ ಮಾಡಲು ಕಷ್ಟಪಡುತ್ತಾರೆ. ಇದಕ್ಕೆ ಕಾರಣ, ಮಗು ಬೆಳೆಯುವ ವಾತಾವರಣ, ಕಲಿಕೆಯ ವಿಧಾನ. ಪರಿಸರ ಎಂದರೆ ಮನೆಯ ಪರಿಸರ, ಶಾಲಾ ಪರಿಸರ ಮತ್ತು ಸಮಾಜ ಅಥವಾ ಗೆಳೆಯರ ಪರಿಸರ. ಇದು ಮೂರು ಚೆನ್ನಾಗಿರಬೇಕು. ಮನೆಯ ಸದಸ್ಯರಿಗೆ ಓದುವ ಅಭ್ಯಾಸವಿರಬೇಕು. ನಿಮ್ಮ ಶಾಲೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ವಿಚಾರಗಳಿಗೂ ಅವಕಾಶ ಕೊಡುವಂತಹ ಕ್ರಿಯಾತ್ಮಕ ಪರಿಸರ ಇರಬೇಕು.
ಮಿದುಳಿಗೆ ಒಂದು ಹುಟ್ಟು ಗುಣವಿದೆ. ಹಿತವಾದದ್ದನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಅಹಿತವೆನಿಸಿದರೆ ಅದನ್ನು ಸ್ವೀಕರಿಸಲ್ಲ. ಗಣಿತ ಕಷ್ಟ, ವಿಜ್ಞಾನ ಕಷ್ಟ ಎಂದು ಭಾವಿಸಿದರೆ ಅದು ಕಷ್ಟವೇ. ಯಾಕೆ ಕಷ್ಟ ನನ್ನಿಂದ ಸಾಧ್ಯ ಎಂದು ಪ್ರಯತ್ನಿಸಿದರೆ ಎಲ್ಲವೂ ಸುಲಭ. ಹೀಗಾಗಿ ನಿಮ್ಮ ವಿಷಯವನ್ನು ಇಷ್ಟಪಟ್ಟು ಓದಬೇಕು. ಇದರಿಂದ ಓದಿದ್ದು ನೆನಪಿರುತ್ತದೆ, ಇಷ್ಟವೂ ಆಗುತ್ತದೆ.