ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ; ಹೆಚ್ಡಿ ಕುಮಾರಸ್ವಾಮಿ
ಮಂಗಳವಾರ, 12 ಅಕ್ಟೋಬರ್ 2021 (19:38 IST)
ಮೈಸೂರು : ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಅದೇ ನನ್ನ ಕೊನೆಯ ಹೋರಾಟ. ಜನರ ಕಷ್ಟ ಬಗೆಹರಿಸಲು ಹೋರಾಟ ಮಾಡುತ್ತೇನೆ. 5 ಯೋಜನೆಗಳ ಮೂಲಕ ಜನರ ಕಷ್ಟ ಬಗೆಹರಿಸುತ್ತೇನೆ.
ಸ್ವತಂತ್ರವಾಗಿ ಅಧಿಕಾರ ಮಾಡಲು ಅವಕಾಶ ನೀಡಿ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಾನು ಆ ಭಾಗ್ಯ ಕೊಡ್ತಿನಿ ಈ ಭಾಗ್ಯ ಕೊಡ್ತಿನಿ ಅಂತ ಹೇಳಲ್ಲ. 10 ಕೆ.ಜಿ ಅಕ್ಕಿ ಕೊಡ್ತಿನಿ ಅಂತ ಹೇಳಲ್ಲ. 10-15 ಕೆ.ಜಿ ಪುಕ್ಕಟೆ ಅಕ್ಕಿ ಕೊಟ್ಟು ಬಿಕ್ಷುಕರನ್ನಾಗಿ ಮಾಡಲ್ಲ. ನಾನು ನಿಮ್ಮನ್ನ ಸ್ವಾವಲಂಬಿಗಳನ್ನಾಗಿ ಮಾಡಬೇಕು. ನನ್ನ ಪಂಚರತ್ನ ಯೋಜನೆಗಳ ಮೂಲಕ ಈ ಕಾರ್ಯ ಮಾಡುತ್ತೇನೆ. ಜನರನ್ನ ಸ್ವಾಭಿಮಾನಿಗಳನ್ನಾಗಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಜನವರಿಯಿಂದ ರಾಜ್ಯದ ಎಲ್ಲಾ ಹಳ್ಳಿಗಳಿಗೂ ಹೋಗುತ್ತೇನೆ. ನನ್ನ ಪಂಚರತ್ನ ಯೋಜನೆಗಳ ಬಗ್ಗೆ ಜನರಲ್ಲಿ ಹೇಳುತ್ತೇನೆ. ಮನೆಗೆ ಒಬ್ಬರಿಗೆ ಉದ್ಯೋಗ ನೀಡುವುದು. ಎಲ್ಲರಿಗೂ ಸೂರು ನೀಡುತ್ತೇನೆ. ಉಚಿತವಾಗಿ ಉತ್ತಮ ಶಿಕ್ಷಣ. ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ. ರೈತರು ಸುಸ್ಥಿರವಾಗಿ ಜೀವನ ಕಟ್ಟಿಕೊಳ್ಳುವ ಯೋಜನೆ ತರುತ್ತೇನೆ ಎಂದು ಪಂಚರತ್ನ ಯೋಜನೆ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಒಬ್ಬಳು ಹೆಣ್ಣು ಮಗಳು ಸಿಕ್ಕಿದ್ದಳು. ಇಷ್ಟು ವರ್ಷ ಕುಮಾರಣ್ಣ ಕುಮಾರಣ್ಣ ಅಂತಾ ಓಟು ಹಾಕಿದೆ. ನಮಗೆ ಏನು ಮಾಡಿದೆ ಅಂತಾ ಹೆಣ್ಣು ಮಗಳು ಕೇಳಿದ್ಲು. ನಾನು ಸ್ವತಂತ್ರ ಸರ್ಕಾರ ಮಾಡಲಿಲ್ಲ. ಬೇರೆಯವರ ಜೊತೆ ಸೇರಿ ಸರ್ಕಾರ ಮಾಡಿದ್ದು. ಕೆಲಸ ಮಾಡಲು ಅವರು ಬಿಡಲಿಲ್ಲ. ನಾನು ಏನು ಮಾಡಲಿ ತಾಯಿ ಎಂದೆ. ಈ ಘಟನೆ ನೆನಪಿಸಿಕೊಂಡು ದಯವಿಟ್ಟು ಬಡತನ ನಿರ್ಮೂಲನೆಗೆ ನನಗೊಂದು ಅವಕಾಶ ನೀಡಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.