ಬೆಂಗಳೂರು : ವಸತಿ ಯೋಜನೆಗಳನ್ನು ಕಾಲಮಿತಿ ಹಾಕಿಕೊಂಡು ಪೂರ್ಣಗೊಳಿಸಲು ತೀರ್ಮಾನಿಸಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ವಿಧಾನಸಭಾ ಕ್ಷೇತ್ರಾವಾರು ಶಾಸಕರ ಸಭೆ ಆರಂಭಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಇಬ್ಬರು ಸಚಿವರು ಹಾಗೂ ಹದಿನೈದು ಶಾಸಕರ ಜತೆ ಸಭೆ ನಡೆಸಿದ ಸಚಿವರು, ವಸತಿ ಇಲಾಖೆ ವ್ಯಾಪ್ತಿಯ ಗೃಹ ಮಂಡಳಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರತಿ ಕ್ಷೇತ್ರವಾರು ಅನುಷ್ಠಾನದಲ್ಲಿರುವ ವಸತಿ ಯೋಜನೆಗಳ ಬಗ್ಗೆ ಶಾಸಕರ ಸಮ್ಮುಖದಲ್ಲೇ ಅಧಿಕಾರಿಗಳ ಜತೆ ಸಭೆ ನಡೆಸಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಅಡೆ ತಡೆ ನಿವಾರಿಸಿ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.
ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜತೆಗೂಡಿ ಅನುಷ್ಠಾನ ಮಾಡುತ್ತಿರುವ ಪ್ರಧಾನ ಮಂತ್ರಿ ಗ್ರಾಮೀಣ ಅವಾಸ್ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರಾವಾರು ಹಂಚಿಕೆ ಆಗಿರುವ ಮನೆ ಹಾಗೂ ಬಾಕಿ ಉಳಿದಿರುವ ಮನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಆದಷ್ಟು ಬೇಗ ಗ್ರಾಮಸಭೆ ಮೂಲಕ ಫಲಾನುಭವಿಗಳ ಪಟ್ಟಿ ನೀಡುವಂತೆ ತಿಳಿಸಿದ್ದಾರೆ.