ಮೌಢ್ಯ ಆಚರಣೆ ಮಾಡಿದರೆ ಜೈಲುಶಿಕ್ಷೆ – ರಾಜ್ಯ ಸರ್ಕಾರದ ಘೋಷಣೆ
ಶುಕ್ರವಾರ, 19 ಜನವರಿ 2018 (11:04 IST)
ಬೆಂಗಳೂರು : ಮೌಢ್ಯ ಆಚರಣೆ ಮಾಡಿದವರ ವಿರುದ್ಧ ಕಠಿಣ ಕ್ರಮ ವಿಧಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಇದನ್ನು ಬೆಂಬಲಿಸುವವರಿಗೆ ಜೈಲು ಶಿಕ್ಷೆಯ ಜೊತೆಗೆ ದಂಡ ಕೂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಮೌಢ್ಯ ಆಚರಣೆಯಿಂದ ಜನರು ಶೋಷಣೆಗೆ ಒಳಗಾಗುವುದಲ್ಲದೆ, ಕೆಲವರು ಪ್ರಾಣವನ್ನೇ ಕಳೆದುಕೊಂಡಂತಹ ಸಂಗತಿಗಳು ನಡೆದಿವೆ. ಆದ್ದರಿಂದ ರಾಜ್ಯ ಸರ್ಕಾರ ಇನ್ನು ಮುಂದೆ ಮೌಢ್ಯ ಆಚರಣೆ ಮಾಡುವವರನ್ನು ಶಿಕ್ಷಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೌಢ್ಯಾಚರಣೆಗಳು ಯಾವುದೆಂದರೆ ಭಾನುಮತಿ, ವಾಮಾಚಾರ, ಬೆತ್ತಲೆ ಮೆರವಣಿಗೆ , ಮೈಮೇಲೆ ಅತೀಂದ್ರಿಯ ಶಕ್ತಿಗಳ ಆಹ್ವಾನ, ದೆವ್ವ ಬಿಡಿಸಲು ಮಾಡುವ ಪ್ರಕ್ರಿಯೆಗಳು, ಸಾರ್ವಜನಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುವುದು, ವೈದ್ಯ ಚಿಕಿತ್ಸೆಯ ಬದಲು ಅಘೋರಿ ಚಿಕಿತ್ಸೆಗೆ ಪ್ರೋತ್ಸಾಹ, ದೇಹಕ್ಕೆ ಕೊಕ್ಕೆ ಚುಚ್ಚಿ ರಥ ಎಳೆಯುವುದು, ಮಕ್ಕಳನ್ನು ಮುಳ್ಳುಗಳ ಮೇಲೆ ಎಸೆಯುವುದು, ಬೆತ್ತಲೆ ಸೇವೆ, ಮಂಡಿಸ್ನಾನ, ಕೆಂಡ ಹಾಯುವುದು, ಸಿಡಿ ಆಡುವುದು ಮುಂತಾದ ಆಚರಣೆಗಳನ್ನು ಮಾಡಿದ್ದರೆ ಅವರಿಗೆ 1ರಿಂದ 7 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೆ 5ಸಾವಿರ ದಿಂದ 50ಸಾವಿರ ರೂ.ಗಳ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ