ಸುಪ್ರೀಂ ಕೋರ್ಟ್ ಆದೇಶಿಸಿದರೆ ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ – ಡಿಕೆಶಿ

ಮಂಗಳವಾರ, 19 ಸೆಪ್ಟಂಬರ್ 2023 (20:34 IST)
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯವಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಈ ಕುರಿತು ಪ್ರತಿಕ್ರಿಯಿಸಿ ಮಾತನಾಡಿದ ಅವರು, ಒಂದು ಕಡೆ ಕಾನೂನಾತ್ಮಕವಾಗಿ ಹೋರಾಟವನ್ನೂ ಮುಂದುವರೆಸಿದ್ದೇವೆ, ಮತ್ತೊಂದೆಡೆ ಕೇಂದ್ರ ಸರ್ಕಾರವನ್ನೂ ಮಧ್ಯಸ್ಥಿಕೆ ವಹಿಸಲು ಕೋರಿದ್ದೇವೆ ಎಂದು ಅವರು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾನೂನಾತ್ಮಕ ಹೋರಾಟ ನಡೆಸಬೇಕೇ ಹೊರತು ತಮಿಳು ನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದ್ದರು. 
 
ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಡಿಕೆಶಿ, ನ್ಯಾಯಾಲಯದ ಆದೇಶವನ್ನೂ ಸಹ ಗಮನದಲ್ಲಿರಿಸಿಕೊಳ್ಳಬೇಕಾಗಿದೆ. ನಾಳೆ ನ್ಯಾಯಾಲಯ ಆದೇಶ ಪಾಲನೆಯಾಗಿಲ್ಲವೆಂಬ ತಕರಾರು ಎತ್ತಿದರೆ ನಾನಾಗಲೀ, ಬೊಮ್ಮಾಯಿಯವರಾಗಲೀ ತಮಿಳುನಾಡಿಗೆ ನೀರು ಹರಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದರು. ರಾಜ್ಯದ ಎಲ್ಲಾ ಸಂಸದರನ್ನೂ ಸಹ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕೇಂದ್ರದ ಮೇಲೆ ಒತ್ತಡ ತರಲು ಮನವಿ ಮಾಡಿಕೊಳ್ಳಲಾಗಿದೆ. ಬೊಮ್ಮಾಯಿಯವರು, ಅವರ ಪಕ್ಷದ ಸಂಸದರನ್ನು ಒಪ್ಪಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನೆರವು ನೀಡಲಿ ಎಂದರು. 
 
ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನೇಮಿಸಲಾಗಿದ್ದ ಕಾನೂನು ತಜ್ಞರ ತಂಡವೇ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ನಾನು ಕಾನೂನು ತಜ್ಞರೊಂದಿಗೆ, ಪ್ರತಿಪಕ್ಷದವರು, ಮಾಜಿ ಪ್ರಧಾನಿ ದೇವೇಗೌಡರ ಸಲಹೆಯನ್ನೂ ಸ್ವೀಕರಿಸುತ್ತಿದ್ದೇನೆ ಎಂದು ಡಿಕೆಶಿ ವಿವರಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ