ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿ ಜೈಲು ಸೇರಿರುವ ಕಾಂಗ್ರೆಸ್ ಶಾಸಕ ಸತೀಶ್ ಜೈಲ್ ಅವರನ್ನು ಇದೀಗ 2ದಿನ ಇ.ಡಿ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಧ್ಯಂತರ ಜಾಮೀನು ನೀಡುವಂತೆ ಸೈಲ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಅನಾರೋಗ್ಯದ ಹಿನ್ನೆಲೆ ಜಾಮೀನು ನೀಡಲು ಮನವಿ ಮಾಡಿದ್ದರು. ಇನ್ನು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುವ ಸಲುವಾಗಿ ಅಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರನ್ನು ಇ.ಡಿ ಕಸ್ಟಡಿಗೆ ಕೇಳಿದ್ದರು.
ನ್ಯಾ.ಸಂತೋಷ್ ಗಜಾನನ ಭಟ್ ಅವರು ಪ್ರಕರಣದ ವಿಚಾರಣೆ ನಡೆಸಿ ಸತೀಶ್ ಸೈಲ್ ಅವರನ್ನು 2ದಿನ ಇ.ಡಿ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದ್ದಾರೆ.
ಸೆ.12ರಂದು ಸಂಜೆ 5 ಗಂಟೆಗೆ ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲು ಸೂಚಿಸಲಾಗಿದೆ.
ಈಚೆಗೆ ಅವರ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ ಕೋಟ್ಯಂತರ ರೂ. ಹಣ ಹಾಗೂ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿತ್ತು. 1.68 ಕೋಟಿ ನಗದು, 6.75 ಕೆಜಿ ಚಿನ್ನದ ಬಿಸ್ಕೆಟ್‌ಗಳು ಮತ್ತು 14.13 ಕೋಟಿ ಹಣ ಹೊಂದಿರುವ ಬ್ಯಾಂಕ್ ಖಾತೆಯನ್ನು ಜಾರಿ ನಿರ್ದೇಶನಾಲಯ ಸೀಜ್ ಮಾಡಿತ್ತು.
ಅಕ್ರಮ ಅದಿರು ಪ್ರಕರಣದಲ್ಲಿ ಜಾಮೀನಿನ ಮೇಲೆ ಶಾಸಕ ಸತೀಶ್ ಸೈಲ್ ಹೊರಗಿದ್ದರು. ಆ.13 ಮತ್ತು 14 ರಂದು ಇ.ಡಿ ಅಧಿಕಾರಿಗಳು, ಶಾಸಕರ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು. ಈ ವೇಳೆ ಅಪಾರ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಸೈಲ್ ಅವರನ್ನು ಮಂಗಳವಾರ ಇ.ಡಿ ಅಧಿಕಾರಿಗಳು ಬಂಧಿಸಿದ್ದರು.