IMA ಮಾಲೀಕ ಮಾನ್ಸೂರ್ ಖಾನ್, ಕಡುಬಡವ ಅಲ್ಪಸಂಖ್ಯಾತ ಬಾಂಧವರ 15 ಸಾವಿರ ಕೋಟಿ ಹಗರಣ ಮಾಡಿ ವಿದೇಶಕ್ಕೆ ಓಡಿ ಹೋಗಿದ್ದಾರೆ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದ್ದಾರೆ.
ಈ ಹಗರಣದ ಬಗ್ಗೆ ಸಿಬಿಐ ನಿಂದಲೇ ತನಿಖೆ ಆಗಬೇಕು ಎಂದು ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದಾರೆ. ED ಈಗಾಗಲೇ ತನ್ನ ತನಿಖೆ ಆರಂಭಿಸಿದೆ. ನಮ್ಮ ಎಲ್ಲ ಸಂಸದರು ED ನಿರ್ದೇಶಕರು ಹಾಗೂ ಪ್ರಧಾನಿ ಅವ್ರಿಗೆ ಮನವಿ ಸಲ್ಲಿಸ್ತೇವೆ. ಲೋಕಸಭೆಯಲ್ಲೂ ಸಂಸದರು ಪ್ರಕರಣದ ಪ್ರಸ್ತಾಪವನ್ನ ಮಾಡ್ತಾರೆ ಎಂದರು.
ಸಚಿವ ಜಮೀರ್ ಅಹ್ಮದ್ IMA ಮಾಲೀಕನ ಬಗ್ಗೆ ತೋರಿಸುತ್ತಿರುವ ಮೃಧು ಧೋರಣೆ ಸಂಶಯಕ್ಕೆ ಕಾರಣವಾಗಿದೆ. ನಾನು ಇಲ್ಲಿಗೆ ಬಂದಿರುವ ಮುಸ್ಲಿಂ ಸಹೋದರಿಯರಿಗೆ ಭರವಸೆ ಕೊಡುತ್ತೇನೆ, ಇದು ಪ್ರಚಾರದ ವಿಷಯವಲ್ಲ. ಕೇಂದ್ರ ಸರ್ಕಾರದ ಮೂಲಕ ಹಣವನ್ನ ಹಿಂದಿರುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಮನ್ಸೂರ್ ಖಾನ್ ಎಲ್ಲೇ ಹೋಗಿದ್ದರೂ ಹಿಡಿದು ತರುವಂತೆ ಕೇಂದ್ರದ ಮೇಲೆ ಒತ್ತಡ ಹಾಕ್ತೇವೆ. ನಾವು ಪ್ರಚಾರಕ್ಕೆ ಪ್ರತಿಭಟನೆ ಮಾಡ್ತಿಲ್ಲ. ದೂರುದಾರರ ಮೋಹಲ್ಲಾದಲ್ಲೇ 25 ಸಾವಿರ ಜನ ಸೇರಿ ಹೋರಾಟ ಮಾಡೋಣ. ಇನ್ಮುಂದೆ ಆದರೂ ಬಡ್ಡಿದರದ ಆಸೆಗೆ ಹೀಗೆ ಹೂಡಿಕೆ ಮಾಡಬಾರದು ಎಂದರು.
ನಾವು ಬಿಜೆಪಿಯವರು ಜಾತಿವಾದಿಗಳಲ್ಲ. ಹಿಂದು-ಮುಸ್ಲಿಂ-ಕ್ರಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಇದನ್ನೇ ನಮ್ಮ ಪ್ರಧಾನಿಗಳೂ ಈಗಾಗಲೇ ಹೇಳಿದ್ದಾರೆ. ಮನ್ಸೂರ್ ಖಾನ್ ಎಲ್ಲೇ ಇದ್ದರೂ ಹಿಡಿದುಕೊಂಡು ಬರ್ತೇವೆ. ನಿಮ್ಮ ಹಣವನ್ನ ವಾಪಾಸ್ ಕೊಡಿಸ್ತೇವೆ. ಸರ್ಕಾರ ಕೂಡ ಹಗರಣದಲ್ಲಿ ಭಾಗಿ ಆಗಿರೋದು ಮೇಲ್ನೋಟಕ್ಕೆ ಕಂಡು ಬರ್ತಿದೆ ಎಂದು ದೂರಿದ್ರು.