ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬೆಳ್ತಂಗಡಿ ಠಾಣೆಯಲ್ಲಿ ದೂತ ಸಮೀರನ ವಿಚಾರಣೆ ಇಂದು

Sampriya

ಭಾನುವಾರ, 24 ಆಗಸ್ಟ್ 2025 (11:39 IST)
Photo Credit X
ಮಂಗಳೂರು: ಧರ್ಮಸ್ಥಳದಲ್ಲಿ ಹೂತು ಹಾಕಲಾಗಿದೆ ಎನ್ನಲಾದ ಬುರುಡೆ ಪ್ರಕರಣದ ಒಂದೊಂದೇ ಮುಖವಾಡ ಕಳಚುತ್ತಿದೆ. ಇದರ ಬೆನ್ನಲ್ಲೇ ಇಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂತ ಸಮೀರನ ವಿಚಾರಣೆ ನಡೆಯಲಿದೆ. 

ಅನನ್ಯಾ ಭಟ್‌ ನಾಪತ್ತೆ ಪ್ರಕರಣದಲ್ಲಿ ತಾಯಿ ಸುಜಾತಾ ಭಟ್‌ ಈಗ ಉಲ್ಟಾ ಹೊಡೆದಿದ್ಧಾರೆ. ಮತ್ತೊಂದೆಡೆ ಮಾಸ್ಕ್‌ಮ್ಯಾನ್‌ ವ್ಯಕ್ತಿಯನ್ನು ಸಿಐಟಿ ಪೊಲೀಸರು ಬಂಧಿಸಿದ್ದು, ಪ್ರಕರಣ ಮಹತ್ವದ ತಿರುವು ಪಡೆದ ಬೆನ್ನಲ್ಲೇ ಸಮೀರ್‌ ವಿಚಾರಣೆಗೆ ಹಾಜರಾಗುತ್ತಿದ್ದಾರೆ. 

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ  ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಇಂದು ಸಮೀರ್‌ ವಿಚಾರಣೆಗೆ ಹಾಜರಾಗಲಿದ್ದಾರೆ. 
ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ ದೂತ ಯೂಟ್ಯೂಬ್‌ ವಾಹಿನಿಯ ಸಮೀರ್‌ಗೆ ಕೋರ್ಟ್‌ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. 


ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವರು ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.  

ಕೋರ್ಟ್‌ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದರು. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು. ಅದರಂತೆ ಸಮೀರ್‌ ಇಂದು ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ. ಬೆಳಗ್ಗೆ 10:30ಕ್ಕೆ ವಿಚಾರಣೆಗೆ ಬರೋದಾಗಿ ತಿಳಿಸಿದ್ದ ಸಮೀರ್‌ 11 ಗಂಟೆಯಾದ್ರೂ ಸುಳಿವಿಲ್ಲ. ಒಂದು ವೇಳೆ ಸಮೀರ್‌ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವ ಸಾಧ್ಯತೆಗಳೂ ಇವೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ