ನಿಲ್ಲದ ಮಳೆ ರಗಳೆ: ರಾಜ್ಯದಲ್ಲಿ ಮತ್ತೆ ಎರಡು ದಿನ ಅಬ್ಬರಿಸಲಿರುವ ವರುಣ

ಶುಕ್ರವಾರ, 10 ಡಿಸೆಂಬರ್ 2021 (17:14 IST)
ಬಹುಶ: ಈ ವರ್ಷ ಮಳೆ ನಿಲ್ಲುವಂತೆ ಕಾಣುತ್ತಿಲ್ಲ. ಚಳಿಗಾಲ ಆರಂಭವಾಗಿ ಎರಡು ತಿಂಗಳು ಕಳೆಯುತ್ತ ಬಂದರೂ ಸಹ ಮಳೆ ಮಾತ್ರ ನಿಲ್ಲುತ್ತಿಲ್ಲ. ಹವಮಾನ ಇಲಾಖೆ ಮಾಹಿತಿ ಪ್ರಕಾರ ರಾಜ್ಯಾದ್ಯಂತ ಇನ್ನು ಎರಡು ದಿನ ಭಾರೀ ಮಳೆಯಾಗಲಿದೆ.
ರಾಜ್ಯದ ಚಿಕ್ಕಮಗಳೂರು, ಹಾಸನ, ರಾಮನಗರ, ಕೊಡಗು, ಬಳ್ಳಾರಿ, ಚಾಮರಾಜನಗರ, ಶಿವಮೊಗ್ಗ, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಇಂದು ಮೋಡ ಕವಿದ ವಾತಾವರಣವಿರಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ಇನ್ನೆರಡುದಿನ ಭಾರೀ ಮಳೆ ಸುರಿಯಲಿದೆ.
ಹಾಗೆಯೇ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಣಿಪುರ, ಒಡಿಶಾ, ತೆಲಂಗಾಣ, ಅರುಣಾಚಲ ಪ್ರದೇಶ, ಮತ್ತು ಲಕ್ಷದ್ವೀಪಗಳಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಅಸ್ಸಾಂ, ಮೇಘಾಲಯ, ಬಿಹಾರ, ಒಡಿಶಾ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ನಿಲ್ಲದ ವರಣನ ಆರ್ಭಟದಿಂದಾಗಿ ಈಗಾಗಲೇ ಭದ್ರಾ, ತುಂಗಾಭದ್ರಾ, ಕೆಆರ್​ಎಸ್ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಘಟಪ್ರಭಾ ಶೇ. 86, ಲಿಂಗನಮಕ್ಕಿ ಶೇ. 84, ಕಬಿನಿ ಜಲಾಶಯದಲ್ಲಿ ಶೇ. 99, ಮಲಪ್ರಭಾ ಶೇ. 92,ಹಾರಂಗಿ ಶೇ. 86, ಆಲಮಟ್ಟಿ ಡ್ಯಾಂ ಶೇ. 95ರಷ್ಟು ಭರ್ತಿಯಾಗಿದೆ. ಇನ್ನೆರಡು ದಿನ ಮತ್ತೆ ಮಳೆಯಾದರೆ ಈ ಜಲಾಶಯಗಳು ಭರ್ತಿಯಾಗಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ