ಮರ್ಸಿಡೀಸ್ ಬೆನ್ಜ್, ಪೋರ್ಶೆ, ಜಾಗ್ವಾರ್, ಲ್ಯಾಂಬೋರ್ಗಿನಿ, ಬಿಎಂಡಬ್ಲ್ಯೂ, ಇನ್ನೋವಾ ಕ್ರಿಸ್ಟಾ ಸೇರಿದಂತೆ ಐಶಾರಾಮಿ ಕಾರುಗಳು ರಸ್ತೆ ತೆರಿಗೆ ಪಾವತಿಸದೆ ಸಂಚರಿಸುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿದೆ. ರಸ್ತೆ ತೆರಿಗೆ ವಂಚನೆ ಜಾಲಾದಲ್ಲಿ ಭಾಗಿಯಾಗಿದ್ದ ಸ್ಮಾರ್ಟ್ ಕಾರ್ಡ್ ಕಂಪನಿ ಮ್ಯಾನೇಜರ್ ಒಬ್ಬನನ್ನು ಬಂಧಿಸಿದ್ದಾರೆ.
ರೋಸ್ ಮಾರ್ಟ್ ಕಂಪನಿ ರಾಜ್ಯಾದ್ಯಂತ ಆರ್ಸಿ ಸ್ಮಾರ್ಟ್ ಕಾರ್ಡ್ನ ಆರ್ಟಿಓಗೆ ಪೂರೈಕೆ ಮಾಡುತ್ತಿದೆ. ಸಿಸಿಬಿ ತನಿಖೆ ವೇಳೆ ಈ ಔಟ್ ಸೋರ್ಸ್ ಕಂಪನಿಯ ಅಸಲಿಯತ್ತು ಬೆಳಕಿಗೆ ಬಂದಿದೆ. ರೋಸ್ ಮಾರ್ಟ್ ಕಂಪನಿ ಆರ್ಟಿಓ ಅಧಿಕಾರಿಗಳಿಗೆ ಯಾಮಾರಿಸಿ ನಕಲಿ ನಂಬರ್ ಪ್ಲೇಟ್ಗಳನ್ನು ನೀಡಿದೆ. ಇದೇ ರೀತಿ 27 ಕಾರುಗಳು ನಕಲಿ ನಂಬರ್ ಪ್ಲೇಟ್ಗಳನ್ನ ಅಳವಡಿಸಿ ರಸ್ತೆಯಲ್ಲಿ ಓಡಾಡುತ್ತಿವೆ. ಓಡಾಡುತ್ತಿರುವ ಕಾರುಗಳೆಲ್ಲವೂ ಕೋಟ್ಯಾಂತರ ರೂಪಾಯಿ ಮೌಲ್ಯದ್ದು ಎಂದು ತಿಳಿದುಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ರೋಚಕ ಸಂಗತಿ:
ಆನಂದ್ ರಾಮ್ ಎಂಬ ವ್ಯಕ್ತಿ ತಮ್ಮ ಜಾಗ್ವಾರ್ ಕಾರಿಗೆ ಎನ್ಓಸಿ ಪಡೆದು ಕಾರನ್ನು ಕರ್ನಾಟಕ ರಿಜಿಸ್ಟ್ರೇಷನ್ಗೆ ವರ್ಗಾವಣೆ ಮಾಡಲು ಬಂದಿದ್ದಾರೆ. ಆಗ ಕಾರನ್ನು ನಕಲಿ ನಂಬರ್ನಲ್ಲಿ ರಿಜಿಸ್ಟರ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ದೂರು ಕೊಟ್ಟ ಬಳಿಕ ತನಿಖೆಗೆ ಇಳಿದ ಸಿಸಿಬಿಗೆ ಮತ್ತೊಂದು ಶಾಕ್ ಕಾದಿತ್ತು. ಪಶ್ಚಿಮ ಬಂಗಾಳದ ಡಬ್ಲ್ಯೂ ಬಿ 01 ಸೀರಿಸ್ ಅಲ್ಲಿ ಜಾಗ್ವಾರ್ ಕಾರನ್ನು ಇಲ್ಲಿ ರಿಜಿಸ್ಟರ್ ಮಾಡಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಡಬ್ಲ್ಯೂ ಬಿ 01 ಸೀರಿಸ್ ದ್ವಿಚಕ್ರ ವಾಹನಗಳಿಗೆ ನೀಡಿರುವುದಾಗಿ ಮಾಹಿತಿ ಇದೆ. ಇದೇ ರೀತಿ 27 ಐಷಾರಾಮಿ ಕಾರುಗಳನ್ನು ನಕಲಿ ನಂಬರ್ ಪ್ಲೇಟ್ನಲ್ಲಿ ಚಲಾಯಿಸುತ್ತಿರುವ ಬಗ್ಗೆ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.